ಬೆಂಗಳೂರು, ಸೆ.19 (DaijiworldNews/PY): "ಪ್ರಧಾನಿ ನರೇಂದ್ರ ಮೋದಿ ಅವರು ನುಡಿದಂತೆ ನಡೆದುಕೊಳ್ಳುವಲ್ಲಿ ವಿಫಲರಾಗಿದ್ದು, ದೇಶವನ್ನು ನಿರುದ್ಯೋಗದ ಕೊಂಪೆಯನ್ನಾಗಿ ಮಾಡುತ್ತ ಸಾಗಿದ್ದಾರೆ" ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ಸದಾಶಿವನಗರ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ರಾಜಕಾರಣಿಗಳು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನುಡಿದಂತೆ ನಡೆಯಬೇಕು. ನಾವು ಜನರ ಸೇವೆ ಮಾಡಲು ಬಂದಿದ್ದು, ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು ಮುಖ್ಯ" ಎಂದಿದ್ದಾರೆ.
"ಎರಡು ಕೋಟಿ ಉದ್ಯೋಗದ ಭರವಸೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ್ದರು. ಕೊರೊನಾ ಸಂದರ್ಭದಲ್ಲಿ ಎರಡು ಕೋಟಿ ಉದ್ಯೋಗ ನಷ್ಟವಾಗಿದೆ. ಹೊಸತಾಗಿ ಯಾರಿಗೂ ಉದ್ಯೋಗ ಸೃಷ್ಟಿ ಮಾಡಿಲ್ಲ. ಯಾವುದೇ ರೀತಿಯಾದ ಕಾರ್ಯಕ್ರಮವನ್ನು ಕೂಡಾ ಯೋಜಿಸಿಲ್ಲ. ಹಾಗಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದಂದು ನಿರುದ್ಯೋಗ ದಿನ ಆಚರಿಸಿದರೆ ಏನು ತಪ್ಪು?" ಎಂದು ಪ್ರಶ್ನಿಸಿದ್ದಾರೆ.