ದಾವಣಗೆರೆ, ಸೆ.19 (DaijiworldNews/PY): ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರ ರಾಜ್ಯ ಪ್ರವಾಸಕ್ಕೆ ಇದ್ದ ಅಡ್ಡಿಗಳೆಲ್ಲಾ ನಿವಾರಣೆಯಾಗಿದ್ದು, ನಾಯಕರೆಲ್ಲರೂ ಸಮ್ಮತಿ ಸೂಚಿಸಿದ್ದಾರೆ.
ದಾವಣಗೆರೆಯಲ್ಲಿ ನಡೆಯುತ್ತಿರುವ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯ ಸಂದರ್ಭ ಉಸ್ತುವಾರಿ ಅರುಣ್ ಸಿಂಗ್ ಸೇರಿದಂತೆ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಎಲ್ಲಾ ನಾಯಕರು ಬಿಎಸ್ವೈ ರಾಜ್ಯ ಪ್ರವಾಸಕ್ಕೆ ಸಮ್ಮತಿ ಸೂಚಿಸಿದ್ದಾರಇದರೊಂದಿಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರ್ಕಕೆ ತರುವ ಸಲುವಾಗಿ ಯಡಿಯೂರಪ್ಪ ಅವರನ್ನು ಬೆಂಬಲಿಸುವುದಾಗಿ ನಾಯಕರು ಭರವಸೆ ನೀಡಿದ್ದಾರೆ. ನಿಗದಿಯಂತೆ ಅಧಿವೇಶನದ ಬಳಿಕ ಯಡಿಯೂರಪ್ಪ ಅವರ ರಾಜ್ಯ ಪ್ರವಾಸ ಪ್ರಾರಂಭವಾಗಲಿದೆ.
ಈ ವೇಳೆ ಮಾತನಾಡಿದ ಅರುಣ್ ಸಿಂಗ್, "ಮಾಜಿ ಸಿಎಂ ಯಡಿಯೂರಪ್ಪ ನಡೆಸಲು ಉದ್ದೇಶಿಸಿರುವ ಪ್ರವಾಸಕ್ಕೆ ನಾವು ಗ್ರೀನ್ ಸಿಗ್ನಲ್ ಅಗತ್ಯವಿಲ್ಲ. ಸಿಎಂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಒಳ್ಳೆಯ ಕಾರ್ಯ ನಡೆಯುತ್ತಿದೆ" ಎಂದಿದ್ದಾರೆ.
"ಪಕ್ಷ ಸಂಘಟನೆಯ ಸಲುವಾಗಿ ನನ್ನ ಪ್ರವಾಸ ಈಗಾಗಲೇ ಆರಂಭವಾಗಿದೆ. ನಾನು ನಿರಂತರವಾಗಿ ಓಡಾಡುತ್ತಿದ್ದೇನೆ. ಚುನಾವಣೆಯಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಇಂದಿನಿಂದಲೇ ಕೆಲಸ ಆರಂಭಿಸುತ್ತೇವೆ" ಎಂದು ಬಿಎಸ್ವೈ ತಿಳಿಸಿದ್ದಾರೆ.
"ಮಾಜಿ ಸಿಎಂ ಅವರನ್ನು ಬದಿಗೆ ಸರಿಸುವ ಪ್ರಶ್ನೆಯೇ ಇಲ್ಲ. ಎಲ್ಲ ಕೂಡಾ ಅವರ ಮಾರ್ಗದರ್ಶನದಲ್ಲಿಯೇ ನಡೆಯುತ್ತದೆ. ಅವರ ರಾಜ್ಯ ಪ್ರವಾಸಕ್ಕೆ ಯಾವುದೇ ಅಡ್ಡಿಯಿಲ್ಲ" ಎಂದು ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
"ಯಡಿಯೂರಪ್ಪನವರಿಗೆ ಅಧಿಕಾರವಿದೆಯೋ ಇಲ್ಲವೋ, ಅವರು ಕರ್ನಾಟಕದಾದ್ಯಂತ ಪ್ರವಾಸ ಮಾಡುತ್ತಾರೆ ಮತ್ತು ರಾಜ್ಯ ಬಿಜೆಪಿಗೆ ಬಲ ತುಂಬುತ್ತಾರೆ ಮತ್ತು ಅದನ್ನು ಮತ್ತೆ ಅಧಿಕಾರಕ್ಕೆ ತರುತ್ತಾರೆ" ಎಂದು ಬಿ ವೈ ವಿಜಯೇಂದ್ರ ತಿಳಿಸಿದ್ದಾರೆ.