ಬಾರ್ಮರ್, ಸ. 18 (DaijiworldNews/HR): ವ್ಯಕ್ತಿಯೊಬ್ಬ ತನ್ನ ನಾಲ್ಕು ಅಪ್ರಾಪ್ತ ಹೆಣ್ಣು ಮಕ್ಕಳನ್ನು ನೀರಿನ ತೊಟ್ಟಿಗೆ ಎಸೆದು ಬಳಿಕ ತಾನು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಪೋಶಾಲಾ ಗ್ರಾಮದಲ್ಲಿ ಇಂದು ನಡೆದಿದ್ದು, ನಾಲ್ವರು ಮಕ್ಕಳು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾಂಧರ್ಭಿಕ ಚಿತ್ರ
ಪುರ್ಖಾ ರಾಮ್ ಎಂಬುವವರು ತನ್ನ ಪುತ್ರಿಯರಾದ ಜಿಯೊ (9), ನೊಜಿ (7), ಹೀನಾ (3) ಮತ್ತು ಒಂದೂವರೆ ವರ್ಷದ ಲಾಸಿಗೆ ವಿಷ ಪ್ರಾಶನ ಮಾಡಿಸಿದ್ದಾರೆ.
ವಿಷವುಣಿಸಿ ಬಳಿಕ ನಾಲ್ಕು ಮಕ್ಕಳನ್ನು ತನ್ನ ಮನೆಯ ಹೊರಗಿನ 13 ಅಡಿ ಆಳದ ನೀರಿನ ತೊಟ್ಟಿಯಲ್ಲಿ ಎಸೆದಿದ್ದಾರೆ ಮತ್ತು ತಾನು ಕೂಡ ಅದರೊಳಗೆ ಧುಮುಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಪುರ್ಖಾ ರಾಮ್ ನೀರಿನ ತೊಟ್ಟಿಗೆ ಜಿಗಿಯುತ್ತಿರುವುದನ್ನು ಕಂಡ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ.
ನಾಲ್ವರು ಮಕ್ಕಳು ನೀರಿನ ತೊಟ್ಟಿಯಲ್ಲಿ ಮುಳುಗಿದ್ದು್ ಅವರ ಮೃತದೇಹಗಳನ್ನು ಹತ್ತಿರದ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಯಿತು. ಪುರ್ಖಾ ರಾಮ್ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಐದು ತಿಂಗಳ ಹಿಂದಷ್ಟೇ ಕೋವಿಡ್ನಿಂದ ಪತ್ನಿ ಮೃತಪಟ್ಟಿದ್ದರಿಂದಾಗಿ ಅವರು ನೊಂದಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.