ಪಶ್ಚಿಮ ಬಂಗಾಳ, ಸೆ 18 (DaijiworldNews/MS): ಕೆಲವು ದಿನಗಳ ಹಿಂದಷ್ಟೇ ರಾಜಕೀಯ ನಿವೃತ್ತಿ ಪಡೆಯುವುದಾಗಿ ಘೋಷಿಸಿದ್ದ ಕೇಂದ್ರದ ಮಾಜಿ ಸಚಿವ, ಭಾರತೀಯ ಜನತಾ ಪಕ್ಷದ ಸಂಸದ ಬಾಬುಲ್ ಸುಪ್ರಿಯೋ ಅವರು ಶನಿವಾರ ಅಚ್ಚರಿಯ ಬೆಳವಣಿಗೆಯಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ (ಟಿಎಂಸಿ) ಸೇರ್ಪಡೆಯಾಗಿದ್ದಾರೆ.
ಟಿಎಂಸಿಯ ಮುಖ್ಯಸ್ಥೆ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಟೀಕಿಸುತ್ತಿದ್ದವರಲ್ಲಿ ಪ್ರಮುಖರಾಗಿದ್ದ ಬಾಬುಲ್, ಜುಲೈನಲ್ಲಿ ರಾಜಕೀಯ ನಿವೃತ್ತಿ ಘೋಷಿಸಿದ್ದರು ಮತ್ತು ಮುಂದೆ ಯಾವುದೇ ಪಕ್ಷವನ್ನು ಸೇರುವುದಿಲ್ಲ ಎಂದು ತಿಳಿಸಿದ್ದರು.
ಮೋದಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ 2014ರಿಂದಲೂ ಹಲವು ಖಾತೆಗಳನ್ನು ನಿರ್ವಹಿಸಿದ್ದ ಸುಪ್ರಿಯೋ ಅವರನ್ನು ಜುಲೈ ತಿಂಗಳ ಆರಂಭದಲ್ಲಿ ನಡೆದ ಕೇಂದ್ರ ಸಚಿವ ಸಂಪುಟದ ಪುನರ್ರಚನೆ ವೇಳೆ ಸಚಿವ ಸ್ಥಾನದಿಂದ ತೆಗೆದುಹಾಕಲಾಗಿತ್ತು. ಆ ಬಳಿಕ ಕೆಲ ದಿನಗಳ ನಂತರ ಅವರು ರಾಜಕೀಯ ನಿವೃತ್ತಿ ನಿರ್ಧಾರ ಪ್ರಕಟಿಸಿದ್ದರು.
ಆದರೆ 'ಇಂದು, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಮತ್ತು ಆರ್ಎಸ್ ಎಂಪಿ ಡೆರೆಕ್ ಒ'ಬ್ರೇನ್ ಅವರ ಸಮ್ಮುಖದಲ್ಲಿ, ಮಾಜಿ ಕೇಂದ್ರ ಸಚಿವ ಮತ್ತು ಹಾಲಿ ಸಂಸದ ಬಾಬುಲ್ ಸುಪ್ರಿಯೋ ತೃಣಮೂಲ ಕುಟುಂಬಕ್ಕೆ ಸೇರಿಕೊಂಡರು" ಎಂದು ತೃಣಮೂಲ ಕಾಂಗ್ರೆಸ್ ಪಕ್ಷವು ಟ್ವೀಟ್ ಮಾಡಿದೆ.