ಕೋಲಾರ, ಸ. 18 (DaijiworldNews/HR): ಜಿ.ಟಿ.ದೆವೇಗೌಡರ ಬಳಿಕ ಇದೀಗ ಮತ್ತೋರ್ವ ಜೆಡಿಎಸ್ ಶಾಸಕ ಶ್ರೀನಿವಾಸಗೌಡ ರಾಜೀನಾಮೆ ನೀಡಿದ್ದು, ಕಾಂಗ್ರೆಸ್ ಸೇರ್ಪಡೆಯಾಗುವುದಾಗಿ ತಿಳಿಸಿದ್ದಾರೆ.
ಜೆಡಿಎಸ್ ನಿಂದ ನನ್ನನ್ನು ಉಚ್ಛಾಟನೆ ಮಾಡುವಂತೆ ರಾಜ್ಯಾಧ್ಯಕ್ಷರಿಗೆ ದೇವೇಗೌಡರು ಹೇಳಿದ್ದು, ಇದನ್ನು ಗಮನಸಿ ನಾನಾಗಿಯೇ ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಕೋಲಾರಕ್ಕೆ ಕೆ.ಸಿ.ವ್ಯಾಲಿ ನೀರು ಬರಲು ರಮೇಶ್ ಕುಮಾರ್ ಹಾಗೂ ಕೃಷ್ಣಭೈರೇಗೌಡ ಕಾರಣರು. ಈ ವಿಚಾರವಾಗಿ ನಾನು ಅವರಿಗೆ ಆದ್ಯತೆ ನೀಡಿದ್ದೆ. ಇದನ್ನೇ ದೊಡ್ಡ ವಿಚಾರ ಮಾಡಿದರು. ಕೆ.ಸಿ.ವ್ಯಾಲಿ ನೀರು ಕೊಚ್ಚೆ ನೀರು ಎಂದಿದ್ದಕ್ಕೆ ನಾನು ಪ್ರತಿಕ್ರಿಯಿಸಬೇಕಾಯ್ತು. ಕೆಲ ಕಹಿ ಘಟನೆಗಳಿಂದ ನೊಂದು ಜೆಡಿಎಸ್ ಗೆ ರಾಜೀನಾಮೆ ನೀಡುತ್ತಿದ್ದೇನೆ ಎಂದಿದ್ದಾರೆ.
ಇನ್ನು "ನಾನು ಈ ಹಿಂದೆ ಕಾಂಗ್ರೆಸ್ ನಲ್ಲಿದ್ದವನು, ಮಂತ್ರಿಯಾದವನು. ಮುಂದೆ ಕೂಡ ಕಾಂಗ್ರೆಸ್ ಸೇರುವ ಬಗ್ಗೆ ತೀರ್ಮಾನಿಸಿದ್ದೇನೆ" ಎಂದರು.
ಈ ಬಗ್ಗೆ ಈಗಗಾಲೇ ಡಿ.ಕೆ.ಶಿವಕುಮಾರ್ ಅವರೊಂದಿಗೆ ಮಾತುಕತೆ ನಡೆಸಿದ್ದೇನೆ. ಆದರೆ ಈವರೆಗೂ ದೇವೇಗೌಡರ ಜೊತೆ ಮಾತನಾಡಿಲ್ಲ. ಆದರೆ ಪಕ್ಷ ಬಿಡಲು ನಿರ್ಧರಿಸಿರುವುದು ಸತ್ಯ ಎಂದು ಹೇಳಿದ್ದಾರೆ.