ಚಿತ್ರದುರ್ಗ, ಸ. 18 (DaijiworldNews/HR): ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬಾರದು. ಒಂದೊಮ್ಮೆ ಅಂತಹ ಸಂದರ್ಭ ಬಂದರೆ ದೇವೇಗೌಡರನ್ನು ಕೇಳುವುದರಲ್ಲಿ ತಪ್ಪಿಲ್ಲ. ಈ ಬಗ್ಗೆ ಮುಂದಿನ ದಿನಗಳಲ್ಲಿ ರಾಷ್ಟ್ರೀಯ ನಾಯಕರು ಜೆಡಿಎಸ್ ಮನೆ ಬಾಗಿಲಿಗೆ ಹೋಗುವ ಬಗ್ಗೆ ತೀರ್ಮಾನಿಸುತ್ತಾರೆ ಎಂದು 2023ಕ್ಕೆ ಎರಡೂ ಪಕ್ಷಗಳು ಜೆಡಿಎಸ್ ಮನೆ ಬಾಗಿಲಿಗೆ ಬರಲಿವೆ ಎಂಬ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಹೇಳಿಕೆಗೆ ಸಾರಿಗೆ ಸಚಿವ ಶ್ರೀರಾಮುಲು ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬಾರದು ಎಂಬ ಸ್ಪಷ್ಟತೆ ಇದ್ದು, ಒಂದೊಮ್ಮೆ ಅಂತಹ ಸಂದರ್ಭ ಬಂದರೆ ದೇವೇಗೌಡರನ್ನು ಕೇಳುವುದರಲ್ಲಿ ತಪ್ಪಿಲ್ಲ. ನಗರ ಪಾಲಿಕೆ ಫಲಿತಾಂಶ ಮುಂದಿನ ಚುನಾವಣೆ ದಿಕ್ಸೂಚಿಯಾಗಲಿದ್ದು, ಮುಂದಿನ ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನಗಳಲ್ಲಿ ಗೆಲ್ಲಲಿದೆ ಎಂಬ ವಿಶ್ವಾಸವಿದೆ" ಎಂದರು.
ಇನ್ನು ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿ, ಕುಮಾರವ್ಯಾಸರ ಪದ್ಯ ಉಲ್ಲೇಖಿಸಿ ಟೀಕಿಸಿದ್ದಾರೆ. ಆದರೆ ಈ ಪದ್ಯ ನಮಗೆ ಅನ್ವಯವಾಗಲ್ಲ. ದೇಶದಲ್ಲಿ ಭ್ರಷ್ಟಾಚಾರ ಹೆಚ್ಚಾಗಲು ಕಾಂಗ್ರೆಸ್ ಕಾರಣ. ಭಾರತ ಆರ್ಥಿಕವಾಗಿ ಹಿಂದುಳಿಯಲೂ, ನಿರುದ್ಯೋಗ ಸಮಸ್ಯೆ ಎದುರಾಗಲು ಕಾಂಗ್ರೆಸ್ ಕಾರಣ. ಕಾಂಗ್ರೆಸ್ ನಲ್ಲಿ ಭ್ರಷ್ಟರು, ಲೂಟಿಕೋರರು ಇದ್ದಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.