ಅಂಕೋಲಾ, ಸೆ.18 (DaijiworldNews/PY): "ಕೊರೊನಾ ವೇಳೆ ದೇಶದಲ್ಲಿ ಅವಶ್ಯಕ ಪ್ರಮಾಣಕ್ಕಿಂತ ಅಧಿಕ ಆಹಾರೋತ್ಪಾದನೆ ಆಗುತ್ತಿದ್ದು, ದೇಶ ಗಮನಾರ್ಹ ಸಾಧನೆ ಮಾಡಿದೆ" ಎಂದು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಇಲ್ಲಿನ ಹೊಸಗದ್ದೆಯ ಬಿ.ಜೆ.ಪಿ ಬೂತ್ ಘಟಕದ ಅಧ್ಯಕ್ಷ ಸೋಮೇಶ್ವರ ಗೌಡ ಅವರ ಮನೆಯಲ್ಲಿ ನಾಮಫಲಕ ಅಂಟಿಸಿ ಮಾತನಾಡಿದ ಅವರು, "ದೇಶದಲ್ಲಿ ಕಳೆದ ವರ್ಷ 305 ಮಿಲಿಯನ್ ಟನ್ ಆಹಾರ ಉತ್ಪಾದನೆ ಸೇರಿದಂತೆ 326 ಮಿಲಿಯನ್ ಟನ್ ತರಕಾರಿ ಉತ್ಪಾದನೆಯಾಗಿದ್ದು, ದಾಖಲೆ ನಿರ್ಮಿಸಿದೆ" ಎಂದಿದ್ದಾರೆ.
"ದೇಶದ ಕೃಷಿ ಉತ್ಪನ್ನಗಳಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಮಾರುಕಟ್ಟೆ ಹೆಚ್ಚಿಸಲು ರೈತರಿಗೆ ತರಬೇತಿ ಹಾಗೂ ಮಾಹಿತಿಯ ಅವಶ್ಯಕತೆ ಮುಖ್ಯ. ಇಂದಿಗೂ ಕೂಡಾ ಕೃಷಿ ವಲಯಗಳಲ್ಲಿ ಹಲವಾರು ಸಮಸ್ಯೆಗಳಿವೆ. ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಅವಶ್ಯಕ ಯೋಜನೆಗಳನ್ನು ತೆಗೆದುಕೊಳ್ಳಲಾಗುತ್ತಿದೆ" ಎಂದು ಹೇಳಿದ್ದಾರೆ.
"ಕೊರೊನಾ ಸಾಂಕ್ರಾಮಿಕದ ಸಂದರ್ಭ ಹಿಂದಿನ ಸರ್ಕಾರ ಹೊರರಾಷ್ಟ್ರಗಳಲ್ಲಿ ತಯಾರಿಸಿದ ಲಸಿಕೆಯನ್ನು 3-4 ವರ್ಷಗಳ ಬಳಿಕ ದೇಶದ ಜನರಿಗೆ ವಿತರಿಸುತ್ತಿತ್ತು. ಕೊರೊನಾ ಸೋಂಕು ಕಾಣಿಸಿಕೊಂಡ 11 ತಿಂಗಳಿನಲ್ಲಿ ಪ್ರಧಾನಿ ಮೋದಿ ಸರ್ಕಾರ ಸ್ವದೇಶಿ ಲಸಿಕೆಯನ್ನು ಸಿದ್ಧಪಡಿಸಿ ಜನರಿಗೆ ವಿತರಣೆ ಮಾಡಿದೆ" ಎಂದಿದ್ದಾರೆ.