ಬೆಂಗಳೂರು, ಸೆ.18 (DaijiworldNews/PY): ಕೌಟುಂಬಿಕ ಕಲಹದ ಹಿನ್ನೆಲೆ ಒಂದೇ ಕುಟುಂಬದ ಐವರು ನೇಣಿಗೆ ಶರಣಾಗಿದ್ದು, ಈ ನಡುವೆ ಪವಾಡ ಎನ್ನುವಂತೆ ಎರಡೂವರೆ ವರ್ಷದ ಪ್ರೇಕ್ಷಾ ಎನ್ನುವ ಹೆಣ್ಣು ಮಗು ಬದುಕುಳಿದಿದೆ.
ಹಲ್ಲೆಗೆರೆ ಶಂಕರ್ ಎಂಬುವರ ಪತ್ನಿ ಭಾರತಿ (51), ಅವರ ಮೊದಲ ಪುತ್ರಿ ಸಿಂಚನಾ (34), ಎರಡನೇ ಪುತ್ರಿ ಸಿಂಧುರಾಣಿ (31) ಪುತ್ರ ಮಧುಸಾಗರ್ (25) ಹಾಗೂ ಸಿಂಧುರಾಣಿಯ 9 ತಿಂಗಳ ಗಂಡು ಮಗು ಆಹಾರವಿಲ್ಲದೇ ಸಾವನ್ನಪ್ಪಿದೆ.
ತಾಯಿ, ಚಿಕ್ಕಮ್ಮ, ಅಜ್ಜಿ ಹಾಗೂ ಮಾವ ಆತ್ಮಹತ್ಯೆ ಮಾಡಿಕೊಂಡ ನಂತರ ದಿಕ್ಕು ತೋಚದೇ ಎರಡೂವರೆ ವರ್ಷದ ಪ್ರೇಕ್ಷಾ ಶವಗಳ ಮುಂದೆ ಕಣ್ಣೀರು ಹಾಕುತ್ತಾ ಅಸ್ವಸ್ಥಗೊಂಡು ಹಾಸಿಗೆ ಪಕ್ಕದಲ್ಲಿ ಬಿದ್ದಿದ್ದಳು. ದೊಡ್ಡ ಮನೆಯಾಗಿದ್ದ ಕಾರಣ ಪ್ರೇಕ್ಷಾಳ ಅಳು ಹೊರಗೆ ಕೇಳಿಸುತ್ತಿರಲಿಲ್ಲ. ಘಟನೆಯ ಬಗ್ಗೆ ತಿಳಿದ ಪೊಲೀಸರು ಬಾಗಿಲು ಒಡೆದು ಮನೆ ಒಳಗೆ ನೋಡಿದಾಗ ಪ್ರೇಕ್ಷಾ ಅರೆ ಪ್ರಜ್ಞಾವಸ್ಥೆಯಲ್ಲಿದ್ದು, ಬದುಕಿರುವುದು ಖಚಿತಪಡಿಸಿಕೊಂಡು ತಕ್ಷಣವೇ ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಸಿಂಧುರಾಣಿ ಅವರ 9 ತಿಂಗಳ ಮಗು ಹಾಲು, ಆಹಾರವಿಲ್ಲದೇ ಸಾವನ್ನಪ್ಪಿರುವುದು ಪತ್ತೆಯಾಗಿದೆ. ಸೆ.12ರಂದು ಮಗುವಿಗೆ ಹಾಲು ಕುಡಿಸಿ ಬೆಡ್ ಮೇಲೆ ಮಲಗಿಸಿದ್ದು, ನಂತರ ಮಗುವಿಗೆ ಆಹಾರ ನೀಡಿಲ್ಲ. ಈ ಕಾರಣದಿಂದ ಮಗು ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ಹೇಳಿವೆ.
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಐದು ದಿನಗಳ ಹಿಂದೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.