ಬೆಂಗಳೂರು, ಸೆ 18 (DaijiworldNews/MS): ಪ್ರಧಾನಿ ಮೋದಿ ಅವರ ಹುಟ್ಟಿದದಿನದಂದು ನಡೆದ ಕೋವಿಡ್ ಲಸಿಕೆ ಅಭಿಯಾನದಲ್ಲಿ ಭಾರತ ಶುಕ್ರವಾರ ಹೊಸ ಮೈಲುಗಲ್ಲು ಸಾಧಿಸಿದ್ದು, ಒಂದೇ ದಿನ ದೇಶಾದ್ಯಂತ ದಾಖಲೆಯ ಎರಡೂವರೆ ಕೋಟಿಗೂ ಹೆಚ್ಚು ಮಂದಿಗೆ ಕೋವಿಡ್ ಲಸಿಕೆ ನೀಡಲಾಗಿದೆ. ಆದರೆ ಈ ಬಗ್ಗೆ ಟೀಕೆ ವ್ಯಕ್ತಪಡಿಸಿರುವ ಕಾಂಗ್ರೆಸ್ "ಕೇಂದ್ರ ಸರ್ಕಾರ ಮೋದಿಯ ಪ್ರಚಾರದ ಇವೆಂಟ್ಗಾಗಿ ವ್ಯಾಕ್ಸಿನ್ ಬ್ಲಾಕಿಂಗ್ " ಮಾಡಿದೆ ಎಂದು ಆರೋಪಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ರಾಜ್ಯ ಘಟಕ ಕೇಂದ್ರದ ವಿರುದ್ದ ಕಿಡಿಕಾರಿದ್ದು, " ಇಷ್ಟು ದಿನ ಲಸಿಕೆ ಕೊರತೆ ಇತ್ತು, ಜನತೆ ಲಸಿಕೆ ಸಿಗದೆ ಪರದಾಡುತ್ತಿದ್ದರು, ಇಂದು ಏಕಾಏಕಿ ಎಲ್ಲೆಡೆ ಲಸಿಕೆಗಳನ್ನು ವ್ಯಾಪಕವಾಗಿ ನೀಡಲಾಗಿದೆ,ಇಷ್ಟು ದಿನ ಸರ್ಕಾರವೇ ಕೃತಕ ಅಭಾವ ಸೃಷ್ಟಿಸಿ 'ವ್ಯಾಕ್ಸಿನ್ ಬ್ಲಾಕಿಂಗ್' ಮಾಡಿದ್ದು ಸ್ಪಷ್ಟ. ಕ್ರೂರ ಮನಸ್ಥಿತಿಯ ಬಿಜೆಪಿ ಜನರನ್ನು ಗೋಳಾಡಿಸಿ ಲಸಿಕೆಗಳನ್ನೂ ಪ್ರಚಾರದ 'ಇವೆಂಟ್'ಗೆ ಬಳಸಿಕೊಂಡಿದೆ. ಲಸಿಕೆಗಳನ್ನು ಜನರ ಅಗತ್ಯದ ಸಮಯಕ್ಕೆ ನೀಡದೆ ಪ್ರಚಾರದ ಸರಕನ್ನಾಗಿಸಿಕೊಂಡಿದೆ ಬಿಜೆಪಿ" ಎಂದು ಹೇಳಿದೆ.
ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿ ಅವರು ಕೇಂದ್ರಕ್ಕೆ ಸಮರ್ಪಕ ಲಸಿಕೆ ಪೂರೈಸುವಂತೆ ಕೇಳಿದ್ದರು, ಸಿಎಂ ಅವರೂ ಹಲವು ಬಾರಿ ಮನವಿ ಮಾಡಿದರೂ ಸ್ಪಂದಿಸದಿದ್ದ ಕೇಂದ್ರ ಸರ್ಕಾರ ಮೋದಿಯವರ ಪ್ರಚಾರದ ಇವೆಂಟ್ಗಾಗಿ 'ವ್ಯಾಕ್ಸಿನ್ ಬ್ಲಾಕಿಂಗ್' ಮಾಡಿತ್ತು ಎನ್ನುವ ಸಂಗತಿ ಬಯಲಾಗಿದೆ ಎಂದು ಆಕ್ರೋಶ್ ಅವ್ಯಕ್ತಪಡಿಸಿದೆ.
ಲಸಿಕೆ ಅಭಿಯಾನಕ್ಕೂ ಮುನ್ನ ಭಾರತೀಯ ಜನತಾ ಪಕ್ಷ(ಬಿಜೆಪಿ) ಪ್ರಧಾನಿ ಮೋದಿಯವರ ಹುಟ್ಟುಹಬ್ಬದಂದು ದೇಶದಲ್ಲಿ ಗರಿಷ್ಠ ಸಂಖ್ಯೆಯ ಕೋವಿಡ್ ಲಸಿಕೆ ನೀಡುವ ಮೂಲಕ ಹೊಸ ದಾಖಲೆ ಸೃಷ್ಟಿಸುವುದಾಗಿ ಹೇಳಿತ್ತು.