ಯಾದಗಿರಿ, ಸೆ.18 (DaijiworldNews/PY): "ವಿಧಾನ ಮಂಡಲ ಅಧಿವೇಶನದ ನಂತರ ತಜ್ಞರ ಸಲಹೆ ಪಡೆದುಕೊಂಡು, 1-5ನೇ ತರಗತಿ ಪ್ರಾರಂಭ ಮಾಡುವ ಕುರಿತು ತೀರ್ಮಾನ ತೆಗೆದುಕೊಳ್ಳಲಾಗುವುದು" ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "1-5ನೇ ತರಗತಿ ಪ್ರಾರಂಭ ಮಾಡುವ ಬಗ್ಗೆ ವಿಧಾನ ಮಂಡಲ ಅಧಿವೇಶನದ ನಂತರ ತಜ್ಞರ ಸಲಹೆ ಪಡೆದು ನಿರ್ಧರಿಸಲಾಗುವುದು. ಸಣ್ಣ ಮಕ್ಕಳು ಕೊರೊನಾ ಮಾರ್ಗಸೂಚಿ ಪಾಲಿಸುವುದು ಕಷ್ಟ. ಈ ಹಿನ್ನೆಲೆ ಸರ್ಕಾರ ಈ ಬಗ್ಗೆ ಅವಸರವಾಗಿ ತೀರ್ಮಾನ ತೆಗೆದುಕೊಳ್ಳುವುದಿಲ್ಲ" ಎಂದು ಹೇಳಿದ್ದಾರೆ.
"ಸದ್ಯ 6ನೇ ತರಗತಿಯಿಂದ ಪಿಯು ತನಕ ಭೌತಿಕ ತರಗತಿಗಳು ನಡೆಯುತ್ತಿದ್ದು, ವಿದ್ಯಾರ್ಥಿಗಳು ಶಾಲೆಗೆ ನಡೆದುಕೊಂಡು ಹೋಗುತ್ತಿರುವುದನ್ನು ಗಮನಿಸಿದ್ದೇನೆ. ಹಳೆ ಬಸ್ ಪಾಸ್ ತೋರಿಸಿದ್ದಲ್ಲಿ ಬಸ್ನಲ್ಲಿ ಪ್ರಯಾಣಿಸಬಹುದು" ಎಂದಿದ್ದಾರೆ.
ಶಿಕ್ಷಕರ ವರ್ಗಾವಣೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಶಿಕ್ಷಕರ ವರ್ಗಾವಣೆಗೆ ಸಂಬಂಧಪಟ್ಟಂತೆ ಕೆಎಟಿ ತಡೆಯಾಜ್ಞೆ ನೀಡಿದೆ. ಈ ವಿಚಾರವಾಗಿ ಹೆಚ್ಚು ಪ್ರತಿಕ್ರಿಯಿಸುವುದಿಲ್ಲ" ಎಂದು ತಿಳಿಸಿದ್ದಾರೆ.