ಲಕ್ನೋ, ಸೆ.18 (DaijiworldNews/PY): "ಬಿಜೆಪಿ ಉತ್ತರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸುಳ್ಳು ಸುದ್ದಿಗಳನ್ನು ಹರಡಲಿದ್ದು, ಬಿಜೆಪಿಯ ಇ-ರಾವಣರ ಕುರಿತು ಎಚ್ಚರವಹಿಸಿ" ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ತಿಳಿಸಿದ್ದಾರೆ.
ವಿಶ್ವಕರ್ಮ ಜಯಂತಿ ಆಚರಣೆಯ ಸಂದರ್ಭದಲ್ಲಿ ಸಮಾಜವಾದಿ ಪಕ್ಷದ ಪ್ರಧಾನ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, "ಉತ್ತರಪ್ರದೇಶದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಯ ಹಿನ್ನೆಲೆ ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಡುವ ಬಿಜೆಪಿ ಇ-ರಾವಣರ ಕುರಿತು ಎಚ್ಚರವಹಿಸಿ" ಎಂದಿದ್ದಾರೆ.
"ಇ-ರಾವಣರು ತರಬೇತಿ ಹಾಗೂ ಹಣ ಪಡೆದುಕೊಂಡು ಸಾಮಾಜಿಕ ಮಾಧ್ಯಮದಲ್ಲಿ ಕುಳಿತುಕೊಂಡು ಜನರನ್ನು ದಾರಿ ತಪ್ಪಿಸುವ ಕಾರ್ಯ ಮಾಡುತ್ತಾರೆ. ಹಾಗಾಗಿ ಅವರ ಬಗ್ಗೆ ನಾವು ಜಾಗರೂಕರಾಗಿರಬೇಕು" ಎಂದು ತಿಳಿಸಿದ್ದಾರೆ.
"ಉತ್ತರಪ್ರದೇಶದಲ್ಲಿ ಮುಂಬರುವ ಚುನಾವಣೆಯು ದೇಶದಲ್ಲಿ ಅತಿದೊಡ್ಡದಾಗಿದ್ದು, ಪ್ರಜಾಪ್ರಭುತ್ವದ ಪರೀಕ್ಷೆಯಾಗಲಿದೆ. ಬಿಜೆಪಿ ಪಿತೂರಿಗಳನ್ನು ರೂಪಿಸಲಿದ್ದು, ಈ ಹಿನ್ನೆಲೆ ಎಲ್ಲರೂ ಎಚ್ಚರದಿಂದಿರಬೇಕು" ಎಂದಿದ್ದಾರೆ.