ಬೆಂಗಳೂರು, ಸೆ 18 (DaijiworldNews/MS): ರಾಜ್ಯ ವಿಧಾನ ಮಂಡಲ ಅಧಿವೇಶನ ಮುಂದುವರಿದಿದ್ದು ವಿಧಾನಸಭೆಯಲ್ಲಿ 2021ನೇ ಸಾಲಿನ ಕರ್ನಾಟಕ ಬಂದೀಖಾನೆ ಅಭಿವೃದ್ಧಿ ಮಂಡಳಿ ವಿಧೇಯಕ ಅಂಗೀಕಾರದ ವೇಳೆ ಮಾತನಾಡಿದ ಶಾಸಕ ಯು.ಟಿ. ಖಾದರ್ ಹಿಂದೂ ಮತ್ತು ಮುಸ್ಲಿಂ ಖೈದಿಗಳನ್ನ ಒಂದೇ ಸೆಲ್ಗೆ ಹಾಕಿ. ಅವರು ಅಲ್ಲೇ ಬಡಿದಾಡಿಕೊಂಡು ಸಾಯಲಿ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ಹಿಂದೂ-ಮುಸ್ಲಿಂ ಕೈದಿಗಳಿಗೆ ಬೇರೆ ಬೇರೆ ಸೆಲ್ ಗಳಿವೆ. ಹಿಂದೂ, ಮುಸ್ಲಿಂ ಖೈದಿಗಳನ್ನು ಒಂದೇ ಸೆಲ್ನಲ್ಲಿ ಹಾಕಿ. ಅವರನ್ನು ಬೇರೆ ಬೇರೆ ಸೆಲ್ಗಳಿಗೆ ಹಾಕೋದು ಯಾಕೆ? ಜೈಲಿಂದ ಹೊರಗೆ ಬಂದರೂ ಅದೇ ಮೆಂಟಾಲಿಟಿಯಲ್ಲಿ ಅವರು ಇರುತ್ತಾರೆ. ಹೊರಗೂ ಅದನ್ನೇ ಬಿಂಬಿಸುತ್ತಾರೆ. ಆದ್ದರಿಂದ ಅವರನ್ನ ಜೈಲಿನಲ್ಲಿ ಒಂದೇ ಸೆಲ್ನಲ್ಲಿ ಹಾಕಬೇಕು. ಅಲ್ಲಿಯೇ ಹೊಡೆದಾಡಿಕೊಂಡು ಸಾಯಲಿ. ಅವರು ಹೊರಗೆ ಬಂದು ಗಲಾಟೆ ಮಾಡೋದು ಬೇಡ ಎಂದರು.
ಮೊದಲ ಬಾರಿ ಜೈಲಿಗೆ ಹೋಗುವವರನ್ನ ಆಸ್ಪತ್ರೆಗೆ ಕಳುಹಿಸಿ ಅಲ್ಲಿ ಮನಃಪರಿವರ್ತನೆ ಮಾಡಬೇಕು. ಇವರನ್ನ ದೊಡ್ಡ ಜೈಲಿಗೆ ಕಳುಹಿಸಿದರೆ ಅಲ್ಲಿ ಕ್ರಿಮಿನಲ್ಗಳ ಪರಿಚಯ ಆಗುತ್ತೆ. ಸಣ್ಣ ತಪ್ಪು ಮಾಡಿ ಜೈಲಿಗೆ ಹೋದವ ದೊಡ್ಡ ಕ್ರಿಮಿನಲ್ ಆಗಿ ಬರುತ್ತಾನೆ. ಹೀಗಾಗಿ ಜೈಲಿನಲ್ಲಿ ಖೈದಿಗಳಿಗೆ ಎಲ್ಲಾ ಸೌಲಭ್ಯ ಸಿಗಬಾರದು. ಒಂದು ಸಾರಿಗೆ ಜೈಲಿಗೆ ಹೋದರೆ ಮತ್ತೆ ಹೋಗುತ್ತೇನೆ ಅನ್ನಬಾರದು, ಹಾಗಿರಬೇಕು ಜೈಲು ವ್ಯವಸ್ಥೆ ಎಂದು ಮಾಜಿ ಸಚಿವರೂ ಆದ ಯುಟಿ ಖಾದರ್ ಸಲಹೆ ನೀಡಿದರು.