ಬೆಂಗಳೂರು, ಸೆ 18 (DaijiworldNews/MS): ಪ್ರಧಾನಿ ಮೋದಿ ಅವರ ಜನ್ಮದಿನದಂದು ನಡೆದ ಕೋವಿಡ್ ಲಸಿಕೆ ಅಭಿಯಾನದಲ್ಲಿ ಭಾರತ ಶುಕ್ರವಾರ ಹೊಸ ಮೈಲುಗಲ್ಲು ಸಾಧಿಸಿದ್ದು, ಒಂದೇ ದಿನ ದೇಶಾದ್ಯಂತ ದಾಖಲೆಯ ಎರಡೂವರೆ ಕೋಟಿಗೂ ಹೆಚ್ಚು ಮಂದಿಗೆ ಕೋವಿಡ್ ಲಸಿಕೆ ನೀಡಲಾಗಿದೆ.
ಶುಕ್ರವಾರ ಬೆಳಗ್ಗೆ ಆರಂಭವಾದ ಲಸಿಕೆ ವಿತರಣೆ ಪ್ರಕ್ರಿಯೆ ರಾತ್ರಿ 12 ರ ವೇಳೆಗೆ ಅಂತ್ಯವಾಯಿತು. ಆರೋಗ್ಯ ಕಾರ್ಯಕರ್ತರು ಮತ್ತು ದೇಶದ ಜನರ ಪರವಾಗಿ ಪ್ರಧಾನಿಗೆ ಇದು ಉಡುಗೊರೆ. ಇಂದು ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದಂದು, ಭಾರತವು ಒಂದೇ ದಿನದಲ್ಲಿ ಎರಡೂವರೆ ಕೋಟಿ ಡೋಸ್ ಲಸಿಕೆ ನೀಡುವ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಿದೆ.
ಕೋ-ವಿನ್ ಪೋರ್ಟಲ್ನ ಮಾಹಿತಿಯ ಪ್ರಕಾರ, ಶುಕ್ರವಾರ ಮಧ್ಯರಾತ್ರಿ 12ರವರೆಗೆ ದೇಶದಲ್ಲಿ 2,50,10,112 ಲಸಿಕೆ ವಿತರಣೆ ಮಾಡಲಾಗಿದೆ. ಇದರೊಂದಿಗೆ ದೇಶದಲ್ಲಿ ಕೋವಿಡ್ ಲಸಿಕೆ ವಿತರಣೆ ಸಂಖ್ಯೆ 79.33 ಕೋಟಿ ಡೋಸ್ ತಲುಪಿದೆ.
ಅಭಿಯಾನದಲ್ಲಿ ದೇಶದಲ್ಲಿಯೇ ಅತೀ ಹೆಚ್ಚು 29 ಲಕ್ಷ ಮಂದಿಗೆ ಲಸಿಕೆ ನೀಡಿದ ಹೆಗ್ಗಳಿಕೆ ಕರ್ನಾಟಕ ಪಾತ್ರವಾಗಿದೆ. ಈ ಮೂಲಕ ಲಸಿಕೆ ಡೋಸ್ ಪಡೆದವರಒಟ್ಟು ಸಂಖ್ಯೆ 5 ಕೋಟಿಗೆ ಏರಿಕೆಯಾಗಿದೆ.
ಇದಕ್ಕು ಮುನ್ನ ಭಾರತೀಯ ಜನತಾ ಪಕ್ಷ(ಬಿಜೆಪಿ) ಪ್ರಧಾನಿ ಮೋದಿಯವರ ಹುಟ್ಟುಹಬ್ಬದಂದು ದೇಶದಲ್ಲಿ ಗರಿಷ್ಠ ಸಂಖ್ಯೆಯ ಕೋವಿಡ್ ಲಸಿಕೆ ನೀಡುವ ಮೂಲಕ ಹೊಸ ದಾಖಲೆ ಸೃಷ್ಟಿಸುವುದಾಗಿ ಹೇಳಿತ್ತು ಎಂದು ಮೂಲಗಳು ತಿಳಿಸಿವೆ.