ಬೆಂಗಳೂರು, ಸೆ. 17 (DaijiworldNews/SM): ಒಂದೇ ಕುಟುಂಬದ ಐವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಪತ್ರಿಕೆಯೊಂದರ ಸಂಪಾದಕ ಹಲ್ಲೆಗೆರೆ ಶಂಕರ್ ಕುಟುಂಬದಲ್ಲಿ ಈ ದುರ್ಘಟನೆ ಸಂಭವಿಸಿದೆ.
ಬ್ಯಾಡರಹಳ್ಳಿಯ 4ನೇ ಕ್ರಾಸ್ ನಲ್ಲಿರುವ ಹಲ್ಲೆಗೆರೆ ಶಂಕರ್ ಮನೆಯಲ್ಲಿ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ಘಟನೆ ನಡೆಯುವ ಸಂದರ್ಭದಲ್ಲಿ ಶಂಕರ್ ಮನೆಯಲ್ಲಿ ಇರಲಿಲ್ಲ ಎಂದು ತಿಳಿದುಬಂದಿದೆ. ಪತ್ನಿ 50 ವರ್ಷದ ಭಾರತಿ, 27 ವರ್ಷದ ಮಗ ಮಧು ಸಾಗರ್, ಹೆಣ್ಣುಮಕ್ಕಳಾದ 33 ವರ್ಷದ ಸಿಂಚನಾ ಮತ್ತು 30 ವರ್ಷದ ಸಿಂಧುರಾಣಿ ಆತ್ಮ್ಹತ್ಯೆ ಮಾಡಿಕೊಂಡವರಾಗಿದ್ದಾರೆ. ದುರ್ದೈವವೆಂದರೆ ಆತ್ಮಹತ್ಯೆಗೂ ಮುನ್ನ ಒಂಬತ್ತು ತಿಂಗಳ ಮಗುವನ್ನು ಪೋಷಕರು ಕೊಲೆ ಮಾಡಿದ್ದಾರೆ.
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಐದು ದಿನಗಳ ಹಿಂದೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಹೆಚ್ಚಿನ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ.