ನವದೆಹಲಿ, ಸೆ.17 (DaijiworldNews/PY): ಐಎಂಎ ಸಂಸ್ಥೆಯಿಂದ ಬಹುಕೋಟಿ ರೂಪಾಯಿ ವಂಚನೆ ಪ್ರಕರಣದ ಸಂಬಂಧ ರೋಷನ್ ಬೇಗ್ ವಿರುದ್ದ ಇಡಿ ವರದಿ ಸಿದ್ಧಪಡಿಸಿದ್ದು, ಹೈಕೋರ್ಟ್ಗೆ ಸಲ್ಲಿಸಿದೆ.
ವರದಿಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ರೋಷನ್ ಬೇಗ್ ಪಾತ್ರದ ಬಗ್ಗೆ ಮಾಹಿತಿ ನೀಡಿದೆ. ಅಕ್ರಮ ಹಣ ವರ್ಗಾವಣೆ ಮಾಡಿದ್ದಕ್ಕೆ ಸಾಕ್ಷಿ ಸಮೇತ ವರದಿಯನ್ನು ಇಂದು ಅಧಿಕೃತವಾಗಿ ಹೈಕೋರ್ಟ್ಗೆ ಸಲ್ಲಿಸಲಾಗಿದೆ.
ವರದಿಯಲ್ಲಿ ತುಂಬಾ ಸೂಕ್ಷ್ಮವಾದ ಅಂಶಗಳನ್ನು ಉಲ್ಲೇಖಿಸಿದ್ದು, ರೋಷನ್ ಬೇಗ್ ಮಾಡುತ್ತಿದ್ದ ವ್ಯವಹಾರಗಳ ಕುರಿತು ಉಲ್ಲೇಖ ಮಾಡಲಾಗಿದೆ. ಅಲ್ಲದೇ, ರೋಷನ್ ಬೇಗ್ ಮೂಲಕ ಕೆಲವು ವ್ಯಕ್ತಿಗಳಿಗೆ ಹಣ ವರ್ಗಾವಣೆಯಾಗಿದ್ದು, ಕೆಲ ರಾಜಕಾರಣಿಗಳಿಗೆ ಅಕ್ರಮ ಹಣ ವರ್ಗಾವಣೆ ಮಾಡಲಾಗಿದೆ ಎನ್ನಲಾಗಿದೆ.
ರೋಷನ್ ಬೇಗ್ ಮೂಲಕ ಹಣ ಹೋಗಿರುವ ಸಾಕ್ಷಿ ಪತ್ತೆ ಮಾಡಲಾಗಿದ್ದು, ಈ ಬಗ್ಗೆ ಮಾಹಿತಿ ವರದಿಯಲ್ಲಿದೆ.