ಕಲಬುರ್ಗಿ, ಸೆ 17 (DaijiworldNews/MS): ಅಧಿಕಾರಕ್ಕಾಗಿ ಯಾರ ಬೂಟು ನೆಕ್ಕುವ ಕೆಲಸ ಮಾಡಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಲೇವಡಿ ಮಾಡಿದ್ದ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರ ಹೇಳಿಕೆಗೆ "ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ" ಎಂದು ಸಿಎಂ ಹೇಳಿದ್ದಾರೆ.
ವಿಧಾನಸಭೆ ಅಧಿವೇಶನದಲ್ಲಿ 'ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಒಬ್ಬ ಫ್ರೀಲ್ಯಾನ್ಸ್ ಪೊಲಿಟಿಶಿಯನ್' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದರು. ಅದಕ್ಕೆ ಸುಬ್ರಮಣಿಯನ್ ಸ್ವಾಮಿ ಬೊಮ್ಮಾಯಿಗೆ ಟಾಂಗ್ ಕೊಟ್ಟಿದ್ದು, "ನಾನು ಸುಮ್ಮನೆ ಆರು ಸಾರಿ ಸಂಸದನಾಗಿ ಆಯ್ಕೆಯಾಗಲಿಲ್ಲ. ಅದರಲ್ಲಿಯೂ ಮೂರು ಸಾರಿ ಲೋಕಸಭೆಯಿಂದ ಆರಿಸಿ ಬಂದಿದ್ದೇನೆ. ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರಿಸಿದ ನಾನು ಅಧಿಕಾರಕ್ಕಾಗಿ ಯಾರ ಹಿಂದೆಯೂ ಬೀಳಲಿಲ್ಲ, ಯಾರ ಬೂಟು ನೆಕ್ಕುವ ಕೆಲಸ ಮಾಡಲಿಲ್ಲ" ಎಂದು ಹೇಳಿದ್ದರು.
ಕಲಬುರ್ಗಿಯ ಐವಾನ್ ಇ ಶಾಹಿ ಅತಿಥಿಗೃಹದಲ್ಲಿ ಮಾತನಾಡಿದ ಸಿಎಂ , " ಸುಬ್ರಮಣಿಯನ್ ಸ್ವಾಮಿ ಅವರೊಬ್ಬ ಸ್ವತಂತ್ರ ಚಿಂತಕ ಎಂದು ಹೇಳಿದ್ದೇನೆ. ಅದು ಟೀಕೆಯಲ್ಲ. ನನ್ನ ಹೇಳಿಕೆ ಖಂಡಿಸಿ ಟ್ವೀಟ್ ಮಾಡಿರುವ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಇದೇ ವೇಳೆ , 'ಕಲಬುರ್ಗಿ ಮಹಾನಗರ ಪಾಲಿಕೆಯಲ್ಲಿ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಜೆಡಿಎಸ್ ಬೆಂಬಲವನ್ನು ಕೋರಿದ್ದೇವೆ. ನಮ್ಮ ಪ್ರಯತ್ನ ಫಲಪ್ರದವಾಗಲಿದೆ' ಎಂದು ಆಶಾವಾದ ವ್ಯಕ್ತಪಡಿಸಿದರು.