ಬೆಂಗಳೂರು, ಸೆ.17 (DaijiworldNews/PY): ರಾಜ್ಯದ ಮಕ್ಕಳಲ್ಲಿ ವೈರಲ್ ಫಿವರ್ ಪ್ರಕರಣಗಳ ಸಂಖ್ಯೆ ಏರಿಕೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆರೋಗ್ಯ ಸಚಿವ ಡಾ.ಕೆ ಸುಧಾಕರ್, "ಇದು ಸೀಸನಲ್ ಫಿವರ್" ಎಂದಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಲಾಕ್ಡೌನ್ ಇದ್ದ ಕಾರಣ ಮಕ್ಕಳು ಮನೆಯೊಳಗೆ ಇದ್ದರು. ರಾಜ್ಯದಲ್ಲಿ ಈಗ ಎಲ್ಲಾ ಚಟುವಟಿಕೆಗಳು ಪುನರಾರಂಭವಾಗಿವೆ. ಹಾಗಾಗಿ ಮಕ್ಕಳಿಗೆ ಸೀಸನಲ್ ಫಿವರ್ ಶುರುವಾಗಿದೆ" ಎಂದು ಹೇಳಿದ್ದಾರೆ.
"ವೈರಲ್ ಫಿವರ್ ಬಗ್ಗೆ ಗಮನಹರಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಸೂಕ್ಷ್ಮವಾಗಿ ಪರೀಕ್ಷೆ ಮಾಡಿ ಟೆಸ್ಟಿಂಗ್ ಮಾಡಬೇಕು ಎಂದು ಸೂಚನೆ ನೀಡಿದ್ದೇನೆ" ಎಂದಿದ್ದಾರೆ.
"ಆರೋಗ್ಯ ಇಲಾಖೆಯ ಜೊತೆ ಚರ್ಚೆ ನಡೆಸಿ ಆಸ್ಪತ್ರೆಗೆ ಬೆಡ್ ಸಮಸ್ಯೆ ಬಗೆಹರಿಸಲಾಗುವುದು. ಎಲ್ಲಾ ಮಕ್ಕಳಿಗೆ ಸೂಕ್ತ ಚಿಕಿತ್ಸೆ ಸಿಗುವಂತಾಗಬೇಕು. ಕೊರೊನಾ ಮೂರನೇ ಅಲೆಯ ಕುರಿತು ಈಗಾಗಲೇ ತಜ್ಞರು ವರದಿ ನೀಡಿದ್ದಾರೆ. ಸರ್ಕಾರಕ್ಕೆ ಈ ಹಿಂದೆ ಕೊರೊನಾ ತಾಂತ್ರಿಕ ಸಲಹಾ ಸಮಿತಿ ಮಾಹಿತಿ ನೀಡಿದ್ದು, ಕೊರೊನಾ ತಾಂತ್ರಿಕಾ ಸಲಹಾ ಸಮಿತಿಯೊಂದಿಗೆ ಚರ್ಚಿಸಲಾಗುವುದು" ಎಂದು ತಿಳಿಸಿದ್ದಾರೆ.