ಕೋಲ್ಕತ್ತಾ, ಸ.17 (DaijiworldNews/HR): "ನಮ್ಮ ಭಾರತ ದೇಶವನ್ನು ಮತ್ತೊಂದು ಪಾಕಿಸ್ತಾನ ಅಥವಾ ತಾಲಿಬಾನ್ ಆಗಲು ಬಿಡುವುದಿಲ್ಲ" ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಉಪಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಗೆದ್ದರೆ ಭವಾನಿಪುರ ಕ್ಷೇತ್ರ ಪಾಕಿಸ್ತಾನ ಆಗಲಿದೆ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿರುವ ಅವರ್ಯು, "ಬಿಜೆಪಿ ವಿಭಜಿಸಿ ಆಳುವ ರಾಜಕೀಯ ಮಾಡುತ್ತಿದೆ. ನನ್ನ ದೇಶ ಬಲಿಷ್ಠವಾಗಿರಬೇಕೆಂದು ನಾನು ಬಯಸುತ್ತೇನೆ. ಭಾರತವನ್ನು ಮತ್ತೊಂದು ತಾಲಿಬಾನ್ ಅಥವಾ ಪಾಕಿಸ್ತಾನ ಆಗಲು ಬಿಡುವುದಿಲ್ಲ" ಎಂದಿದ್ದಾರೆ.
ಇನ್ನು "ಬಿಜೆಪಿಯವರ ನೀತಿ ಹಾಗೂ ರಾಜಕೀಯ ನನಗೆ ಇಷ್ಟವಾಗುವುದಿಲ್ಲ. ಬಿಜೆಪಿಯವರು ಜನರನ್ನು ಧರ್ಮದ ಆಧಾರದಲ್ಲಿ ವಿಭಜಿಸಿ ರಾಜಕೀಯ ನಡೆಸುತ್ತಿದ್ದಾರೆ. ಈ ಮುನ್ನ, ನಂದಿಗ್ರಾಮದಲ್ಲಿಯೂ ಟಿಎಂಸಿ ಗೆದ್ದರೆ ನಂದಿಗ್ರಾಮ ಪಾಕಿಸ್ತಾನ ಆಗಲಿದೆ ಎಂದಿದ್ದರು. ಈಗ ಭವಾನಿಪುರದಲ್ಲಿಯೂ ಅದನ್ನೇ ಹೇಳುತ್ತಿದ್ದಾರೆ" ಎಂದರು.
ಬಿಜೆಪಿಯು ಇಡೀ ದೇಶವನ್ನು ಮಾರಾಟ ಮಾಡಲು ಹೊರಟಿದ್ದು, ರೈಲು, ವಿಮಾನ ನಿಲ್ದಾಣ, ಬಂದರು ಎಲ್ಲವನ್ನೂ ಮಾರಾಟ ಮಾಡಿಕೊಂಡು ಬರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.