ಶಿವಮೊಗ್ಗ, ಸೆ.17 (DaijiworldNews/PY): "ನಾನು ಎಲ್ಲಿ ಚುನಾವಣೆ ಎದುರಿಸಬೇಕು. ಚುನಾವಣೆಗೆ ನಾನು ಸ್ಪರ್ಧಿಸಬೇಕೋ ಅಥವಾ ಬೇಡವೋ ಎನ್ನುವುದನ್ನು ಪಕ್ಷದ ಹಿರಿಯರು ತೀರ್ಮಾನಿಸಲಿದ್ದಾರೆ" ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, "ದಾವಣಗೆರೆಯಲ್ಲಿ ಶನಿವಾರ ಹಾಗೂ ಭಾನುವಾರ ಬಿಜೆಪಿ ಅಧ್ಯಕ್ಷರ ನೇತೃತ್ವದಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯಲಿದೆ. ಈ ಸಂದರ್ಭ, ಮುಂದಿನ ಚುನಾವಣೆಗಳನ್ನು ಎದುರಿಸುವ ಬಗ್ಗೆ ಹಾಗೂ ರಾಜ್ಯದಲ್ಲಿನ ಜ್ವಲಂತ ಸಮಸ್ಯೆಗಳ ಕುರಿತು ಚರ್ಚಿಸಲಿದ್ದೇವೆ" ಎಂದಿದ್ದಾರೆ.
"ನಾನು ಭಾರತೀಯ ಪಕ್ಷದ ಕಾರ್ಯಕರ್ತನಾಗಿದ್ದು, ನಾನು ಉಪಾಧ್ಯಕ್ಷನಾಗಿ ನನ್ನ ಕಾರ್ಯವನ್ನು ನಿರ್ವಹಿಸುತ್ತಿದ್ದೇನೆ. ಯಾವುದೇ ಹುದ್ದೆಯ ನಿರೀಕ್ಷೆ ಇಟ್ಟುಕೊಂಡು ನಾನು ಕೆಲಸ ಮಾಡುತ್ತಿಲ್ಲ" ಎಂದು ತಿಳಿಸಿದ್ದಾರೆ.
ದೇವಾಲಯ ಕೆಡವುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, "ದೇವಾಲಯಗಳನ್ನು ಸುಪ್ರೀಂ ಕೋರ್ಟ್ನ ತೀರ್ಪಿನ ಹಿನ್ನೆಲೆ ಕೆಡವಲಾಗುತ್ತಿದೆ. ಸಿಎಂ ಅವರು ದೇವಾಲಯ ಕೆಡವಲು ಅವಕಾಶ ನೀಡುವುದಿಲ್ಲ ಎಂದಿದ್ದರು. ಈ ವಿಚಾರವಾಗಿ ಅಧಿಕಾರಿಗಳು ಯೋಚನೆ ಮಾಡಬೇಕು. ಸುಪ್ರೀಂ ಕೋರ್ಟ್ನ ತೀರ್ಪು ಇದ್ದರೂ ಕೂಡಾ ಜನರ ಭಾವನೆಗಳನ್ನು ಅರ್ಥ ಮಾಡಿಕೊಂಡು ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕು" ಎಂದಿದ್ದಾರೆ.