ಬೆಂಗಳೂರು, ಸೆ 17 (DaijiworldNews/MS): ದ್ವಿತೀಯ ಪಿಯುಸಿ ವಿದ್ಯಾರ್ಥಿಯೋರ್ವ ಪಿಸ್ತೂಲ್ ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಸದಾಶಿವನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವರದಿಯಾಗಿದೆ.
ಸಂಜಯನಗರ ಮುಖ್ಯ ಬಸ್ ನಿಲ್ದಾಣದ ಸಮೀಪ ವಿದ್ಯಾರ್ಥಿ ಶವ ಪತ್ತೆಯಾಗಿದೆ. ಮೃತಪಟ್ಟ ವಿದ್ಯಾರ್ಥಿಯನ್ನುಕಳೆದ ಇಪ್ಪತ್ತು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದ ಉತ್ತರಾಖಂಡ ಮೂಲದ ಭಗತ್ ಸಿಂಗ್ ಹಾಗೂ ಬಾಬ್ನಾ ದಂಪತಿಯ ಪುತ್ರ ರಾಹುಲ್ ಭಂಡಾರಿ (17) ಎಂದು ಗುರುತಿಸಲಾಗಿದೆ
ರಾಹುಲ್ ಆರ್ಮಿ ಶಾಲೆಯ ದ್ವಿತೀಯ ಪಿಯುಸಿಲ್ಲಿ ಓದುತ್ತಿದ್ದ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದಾನೆ. ರಾಹುಲ್ ಪರೀಕ್ಷೆಯ ಸಿದ್ದತೆಗಾಗಿ ಮುಂಜಾನೆ 4 ಗಂಟೆಗೆ ಎದ್ದು ಅಭ್ಯಾಸಿಸುತ್ತಿದ್ದ. ಇದರ ನಡುವೆ ಕೆಲವೊಮ್ಮೆ ಮನೆಯಿಂದ ಹೊರ ಬಂದು ವಾಕಿಂಗ್ ಮಾಡುತ್ತಿದ್ದ. ರಾತ್ರಿ ಊಟ ಮಾಡಿ ಮಲಗಿದ್ದ ರಾಹುಲ್ ಭಂಡಾರಿ ಶುಕ್ರವಾರ ಮುಂಜಾನೆ 4 ಗಂಟೆ ವೇಳೆಗೆ ಮನೆಯಿಂದ ಹೊರ ಬಂದಿದ್ದಾನೆ. ಮುಂಜಾನೆ ನಿದ್ದೆಯಿಂದ ಎದ್ದ ಪೋಷಕರು ರೂಂನಲ್ಲಿ ರಾಹುಲ್ ಕಾಣದಿದ್ದಾಗ ಕರೆ ಮಾಡಿದ್ದಾರೆ. ಆದರೆ ಪೋನ್ ಕರೆ ಸ್ವೀಕಾರ ಮಾಡಿಲ್ಲ. ರಾಹುಲ್ ಮೃತದೇಹ ನೋಡಿದ ಪೊಲೀಸರು ಪೋಷಕರಿಂದ ಬರುತ್ತಿದ್ದ ಕರೆ ಗಮನಿಸಿ ಅವರಿಗೆ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ.
ಆರ್ಮಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ತಂದೆಯ ಲೈಸನ್ಸ್ ಇರುವ ಪಿಸ್ತೂಲ್ ನಿಂದ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾನೆ. ರಾಹುಲ್ ಭಂಡಾರಿ ತಲೆಯ ಎಡಭಾಗಕ್ಕೆ ಗುಂಡು ಹೊಕ್ಕಿದೆ. ಕೇಂದ್ರ ವಿಭಾಗದ ಡಿಸಿಪಿ ಅನುಚೇತ್ ಸೇರಿದಂತೆ ಹಲವು ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಪೋಷಕರ ಅಕ್ರಂದನ ಮುಗಿಲು ಮುಟ್ಟಿದೆ.
ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ನೀವು ಯಾವುದೇ ತೊಂದರೆಯಲ್ಲಿದ್ದರೆ ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರ ಸಹಾಯ ಪಡೆಯಿರಿ. ಸಹಾಯವಾಣಿ ಸಂಖ್ಯೆ – 9152987821