ಮೈಸೂರು, ಸ.17 (DaijiworldNews/HR): ದೇಗುಲದ ಮೇಲೆ ಸಿದ್ದರಾಮಯ್ಯನವರಿಗೆ ಈಗ ಯಾಕೆ ಇಷ್ಟೊಂದು ಪ್ರೀತಿ ಬಂದಿದೆ. ಈ ಪ್ರೀತಿ ಲಿಂಗಾಯತರನ್ನ ಒಡೆದು ರಾಜಕಾರಣ ಮಾಡುವಾಗ ಇರಲಿಲ್ಲವೇ? ಟಿಪ್ಪು ಜಯಂತಿ ಆಚರಣೆ ಮಾಡುವುದರಲ್ಲಿ ನಿರತರಾಗಿದ್ದ ನಿಮಗೆ ದೇವಸ್ಥಾನಗಳ ಕೆಡವುವ ಬಗ್ಗೆ ಕೋರ್ಟ್ ಆದೇಶ ಗೊತ್ತಾಗಲಿಲ್ಲವೇ? ಎಂದು ಸಂಸದ ಪ್ರತಾಪ್ ಸಿಂಹ ಸಿದ್ದರಾಮಯ್ಯರವರನ್ನು ಪ್ರಶ್ನಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಸಿದ್ದರಾಮಯ್ಯನವರ ಆಡಳಿತದಲ್ಲಿ ಕೋರ್ಟ್ಗೆ ವರದಿ ಕೊಡಬೇಕಿತ್ತು. 2018 ಫೆ. 6 ರಂದು ದೇವಸ್ಥಾನ ತೆರವು ವಿಚಾರದಲ್ಲಿ ಅಂತಿಮ ಆದೇಶ ಕೊಟ್ಟಿದ್ದು, ಈ ಆದೇಶವನ್ನು ನಿಮಗೂ ಐಎಎಸ್ ಅಧಿಕಾರಿಗಳು ಸರಿಯಾಗಿ ವಿವರಿಸಿಲ್ಲ. ಆಗ ಬಿಜೆಪಿ ಸರಕಾರ ಇತ್ತು, ಅವತ್ತು ಅಧಿಕಾರಿಗಳು ತಪ್ಪು ಮಾಡಿದರು. ಬಿಜೆಪಿ ಆಡಳಿತದಲ್ಲೂ ಆ ತಪ್ಪು ನಡೆಯಿತು. ನಿಮ್ಮ ಅಧಿಕಾರದಲ್ಲೂ ಆ ತಪ್ಪು ಮುಂದುವರಿಯಿತು. ಆಡಳಿತಾತ್ಮಕ ವಿಚಾರದಲ್ಲಿ ಐಎಎಸ್ ಅಧಿಕಾರಿಗಳು ಸರಕಾರಕ್ಕೆ ಸರಿಯಾದ ವಿವರಣೆ ನೀಡುತ್ತಿಲ್ಲ. ರಾಜಕಾರಣಿಗಳು ಅಧಿಕಾರಿಗಳು ಮಾಡುವ ತಪ್ಪನ್ನು ತಮ್ಮ ಮೇಲೆ ಎಳೆದುಕೊಳ್ಳಬೇಡಿ "ಎಂದರು.
ಇನ್ನು "ಸಿದ್ದರಾಮಯ್ಯನವರೇ ನೀವು ದೇವಸ್ಥಾನ ಉಳಿಸಿಕೊಳ್ಳಲು ಯಾವ ಪ್ರಯತ್ನವನ್ನು ನಿಮ್ಮ ಆಡಳಿತದಲ್ಲಿ ಮಾಡಲಿಲ್ಲ. ನಿಮಗೆ ದೇವಸ್ಥಾನ ಬಗ್ಗೆ ಪ್ರೀತಿ ಇದ್ದಿದ್ದರೆ ವಿಗ್ರಹ ಭಂಜಕ ಟಿಪ್ಪು ಜಯಂತಿ ಮಾಡುತ್ತಿರಲಿಲ್ಲ" ಎಂದು ಹೇಳಿದ್ದಾರೆ.