ಉತ್ತರಪ್ರದೇಶ, ಸೆ 17 (DaijiworldNews/MS): ರಕ್ತ ಕಳ್ಳಸಾಗಣೆ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ಉತ್ತರ ಪ್ರದೇಶ ಪೊಲೀಸರ ವಿಶೇಷ ಕಾರ್ಯಪಡೆ ಸೆಫಾಯಿ ವೈದ್ಯಕೀಯ ಕಾಲೇಜಿನ ಸಹಾಯಕ ಪ್ರಾಧ್ಯಾಪಕರು ಸೇರಿದಂತೆ ಇಬ್ಬರನ್ನು ಬಂಧಿಸಿದೆ.ಇವರಿಂದ 100 ಯೂನಿಟ್ಗಳಷ್ಟು ರಕ್ತವನ್ನು ವಶಕ್ಕೆ ಪಡೆಯಲಾಗಿದೆ.
ಎರಡೂವರೆ ವರ್ಷಗಳ ಹಿಂದೆ, ಉತ್ತರ ಪ್ರದೇಶದ ಎಸ್ಟಿಎಫ್ ತಂಡ ಕಲಬೆರಕೆ ರಕ್ತದ ಖರೀದಿ ಮತ್ತು ಮಾರಾಟದಲ್ಲಿ ತೊಡಗಿದ್ದ ದಂಧೆಯನ್ನು ಭೇದಿಸಿತ್ತು. ಅಂದಿನಿಂದ, ತಂಡವು ಇಂತಹ ಮಾನವ ರಕ್ತ ಕಳ್ಳಸಾಗಣೆ ತಂಡಗಳ ಬಗ್ಗೆ ಸೂಕ್ಷ್ಮ ಕಣ್ಣಿಟ್ಟಿತ್ತು.
ಉತ್ತರ ಪ್ರದೇಶದಿಂದ ರಾಜಸ್ಥಾನ, ಹರಿಯಾಣ ಮತ್ತು ಪಂಜಾಬ್ಗೆ ರಕ್ತವನ್ನು ಕಳ್ಳಸಾಗಣೆ ಮಾಡುತ್ತಿದ್ದ ದಂಧೆಯಲ್ಲಿ ತೊಡಗಿಸಿಕೊಂಡಿದ್ದ ಸಹಾಯಕ ಪ್ರಾಧ್ಯಾಪಕ ಡಾ.ಅಭಯ್ ಪ್ರತಾಪ್ ಸಿಂಗ್ ಅವರನ್ನು 45 ಯೂನಿಟ್ ರಕ್ತದೊಂದಿಗೆ ಕಳ್ಳಸಾಗಣೆಯ ಸಮಯದಲ್ಲಿ ಲಕ್ನೋ-ಆಗ್ರಾ ಎಕ್ಸ್ಪ್ರೆಸ್ವೇಯಲ್ಲಿ ಬಂಧಿಸಲಾಗಿದೆ ಎಂದು ಹೇಳಿದರು.
ವಿಚಾರಣೆಯ ಸಮಯದಲ್ಲಿ, ಡಾ.ಅಭಯ್ ಸಿಂಗ್ ಅವರು ದಾನ ಮಾಡಿದ ರಕ್ತವನ್ನು ಸಂಗ್ರಹಿಸಿ ತಮ್ಮ ಅಕ್ರಮ ವ್ಯವಹಾರಕ್ಕೆ ಬಳಕೆ ಮಾಡುತ್ತಾರೆ ಎಂದು ಬಹಿರಂಗಪಡಿಸಿದ್ದಾರೆ, ಇದಕ್ಕಾಗಿ ಅವರು ಮನೆಯಲ್ಲಿ ಎಲ್ಲಾ ದಾಖಲೆಗಳನ್ನು ಸಿದ್ದ ಮಾಡಿ ಇಟ್ಟುಕೊಂಡಿದ್ದಾರೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಎಸ್ಟಿಎಫ್ ತಂಡವು ವೈದ್ಯರನ್ನು ಅಭಯ್ ಸಿಂಗ್ ಸುಶಾಂತ್ ಗಾಲ್ಫ್ ಸಿಟಿಯಲ್ಲಿರುವ ಗಂಗೋತ್ರಿಯ ಅಪಾರ್ಟ್ಮೆಂಟ್ಗೆ ಕರೆದೊಯ್ದಾಗ, ಆತನ ಫ್ರಿಡ್ಜ್ನಿಂದ 55 ಯೂನಿಟ್ ರಕ್ತವನ್ನು ವಶಕ್ಕೆ ಪಡೆಯಲಾಗಿದೆ ಮತ್ತು ಆತನ ಪಾಲುದಾರ ಅಭಿಷೇಕ್ ಪಾಠಕ್ ಫ್ಲಾಟ್ನ ಇನ್ನೊಂದು ಕೋಣೆಯಲ್ಲಿ ಸಿಕ್ಕಿಬಿದ್ದ.
ಫುಡ್ ಸೇಫ್ಟಿ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (ಎಫ್ ಎಸ್ ಡಿ ಎ) ತಂಡವು ಸಿಂಗ್ ತೋರಿಸಿದ ದಾಖಲೆಗಳನ್ನು ಸ್ಕ್ಯಾನ್ ಮಾಡಿದಾಗ ಅದು ನಕಲಿಯಾಗಿರುವುದು ಕಂಡುಬಂದಿದೆ.
ಪ್ರಾಥಮಿಕ ವಿಚಾರಣೆಯಲ್ಲಿ ಡಾ. ಸಿಂಗ್ ಕೇವಲ ರಕ್ತ ಕಳ್ಳಸಾಗಣೆಯಲ್ಲಿ ತೊಡಗಿದ್ದಲ್ಲದೇ ಕಲಬೆರಕೆ ರಕ್ತವನ್ನು ತಯಾರಿಸಿ ಪೂರೈಸುತ್ತಿದ್ದರು ಎಂದು ತಿಳಿದುಬಂದಿದೆ.
ರಾಜಸ್ಥಾನ, ಹರಿಯಾಣ ಮತ್ತು ಪಂಜಾಬ್ ನಲ್ಲಿ ಜನರು ರಕ್ತದಾನ ಮಾಡುವ ಅಭ್ಯಾಸ ಹೊಂದಿರುವುದರಿಂದ, ರಕ್ತನಿಧಿಯಲ್ಲಿ ಸಾಕಷ್ಟು ರಕ್ತಸಂಗ್ರಹವಿದೆ. ವೈದ್ಯರು ಇಂತಹ ರಕ್ತನಿಧಿಗಳಿಂದ ಒಂದು ಯೂನಿಟ್ ರಕ್ತವನ್ನು 1200 ರೂ. ಗೆ ಖರೀದಿಸುತ್ತಾರೆ. ಮತ್ತು ಇದನ್ನು ಲಕ್ನೋ ಮತ್ತು ಹತ್ತಿರದ ನರ್ಸಿಂಗ್ ಹೋಂಗಳಲ್ಲಿ ರೂ. 4000 ದಿಂದ 6000 ರೂ.ಗಳಿಗೆ ಮಾರಾಟ ಮಾಡುತ್ತಾರೆ
"ಇದು ಮಾತ್ರವಲ್ಲ, ಅಗತ್ಯವಿದ್ದಾಗ, ಒಂದು ಯೂನಿಟ್ ರಕ್ತದಲ್ಲಿ ಲವಣಯುಕ್ತ ನೀರನ್ನು ಬೆರೆಸಿ ಎರಡು ಯೂನಿಟ್ ಬ್ಲಡ್ ಪ್ಯಾಕೆಟ್ಗಳನ್ನು ತಯಾರಿಸಿ ಮಾರಾಟ ಮಾಡುವ ದಾಂಧೆಯನ್ನು ಹೊಂದಿದ್ದಾರೆ" ಎಂದು ಅಧಿಕಾರಿ ಹೇಳಿದರು.