ಕಲಬುರ್ಗಿ, ಸ.17 (DaijiworldNews/HR): "ಸರ್ದಾರ್ ವಲ್ಲಭಭಾಯಿ ಪಟೇಲರು ಹೈದರಾಬಾದ್ ಕರ್ನಾಟಕದ ವಿಮೋಚನೆಗೆ ಕಾರಣರಾದ ಪ್ರಥಮ ಉಕ್ಕಿನ ಮನುಷ್ಯರಾದರೆ, ಈ ಭಾಗಕ್ಕೆ ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿದ ಬಿ.ಎಸ್. ಯಡಿಯೂರಪ್ಪ ಅವರು ಇನ್ನೊಬ್ಬ ಉಕ್ಕಿನ ಮನುಷ್ಯ" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯಲ್ಲಿ ಪಾಲ್ಗೊಂಡು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, "ಯಡಿಯೂರಪ್ಪ ಅವರು ಈ ಭಾಗಕ್ಕೆ ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿದ್ದು, ಹಲವಾರು ಕಾರ್ಯಕ್ರಮಗಳಿಗೂ ಅವರು ರೂವಾರಿಗಳಾಗಿದ್ದಾರೆ. ಅವರ ಎಲ್ಲ ಕಾರ್ಯಕ್ರಮಗಳನ್ನು ಮುಂದುವರೆಸುತ್ತೇವೆ. ಜನರ ಜೀವನ ಮಟ್ಟ ಸುಧಾರಿಸುವ ಮೂಲಕ ಕಲ್ಯಾಣ ಕರ್ನಾಟಕ ಹೆಸರಿಗೆ ಸಾರ್ಥಕತೆ ತುಂಬುವ ಛಲದಿಂದ ನಾನು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೇನೆ" ಎಂದರು.
ಇನ್ನು "ಸರ್ದಾರ್ ವಲ್ಲಭಭಾಯಿ ಪಟೇಲರು ಭಾರತವನ್ನು ರಿಪಬ್ಲಿಕ್ ದೇಶವನ್ನಾಗಿ ಮಾಡಿದ ಪ್ರಥಮ ನಾಯಕರಾಗಿದ್ದು, ಅವರು ನಮಗೆಲ್ಲ ಆದರ್ಶರು. ಅವರು ತೋರಿಸಿರುವ ತತ್ವ ಆದರ್ಶಗಳ ಅಡಿಯಲ್ಲಿ ಸ್ವತಂತ್ರ ಭಾರತವನ್ನು ನಾವು ಮುನ್ನಡೆ ಮಾಡುತ್ತಿದ್ದೇವೆ" ಎಂದು ಹೇಳಿದ್ದಾರೆ.