ನವದೆಹಲಿ, ಸ.17 (DaijiworldNews/HR): ನಾನು ಸುಮ್ಮನೆ ಆರು ಸಾರಿ ಸಂಸದನಾಗಿದ್ದು, ಅದರಲ್ಲಿಯೂ ಮೂರು ಸಾರಿ ಲೋಕಸಭೆಯಿಂದ ಆರಿಸಿ ಬಂದಿದ್ದೇನೆ. ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟಿರುವ ನಾನು ಅಧಿಕಾರಕ್ಕಾಗಿ ಯಾರ ಹಿಂದೆಯೂ ಬೀಳಲಿಲ್ಲ, ಯಾರ ಬೂಟು ನೆಕ್ಕುವ ಕೆಲಸ ಮಾಡಲಿಲ್ಲ ಎಂದು ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.
ಸುಬ್ರಮಣಿಯನ್ ಸ್ವಾಮಿ ಒಬ್ಬ ಫ್ರೀಲ್ಯಾನ್ಸ್ ಪೊಲಿಟಿಶಿಯನ್ ಎಂದಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ತಿರುಗೇಟು ನೀಡಿ ಟ್ವೀಟ್ ಮಾಡಿರುವ ಸುಬ್ರಮಣಿಯನ್, "ನಾನು ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಟ್ಟು ಬಂದವನು. ಅಧಿಕಾರಕ್ಕಾಗಿ ಯಾರ ಹಿಂದೆಯೂ ಬೀಳಲಿಲ್ಲ, ಯಾರ ಬೂಟು ನೆಕ್ಕುವ ಕೆಲಸ ಮಾಡಲಿಲ್ಲ" ಎಂದಿದ್ದಾರೆ.
ಇನ್ನು ಬೆಲೆ ಏರಿಕೆ ಚರ್ಚೆ ವೇಳೆ ವಿಧಾನಸಭೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಸುಬ್ರಮಣಿಯನ್ ಸ್ವಾಮಿ ಅವರ ಟ್ವೀಟ್ ಗಳನ್ನು ಉಲ್ಲೇಖ ಮಾಡಿದ್ದು, ನಿಮ್ಮ ಪಕ್ಷದವರೇ ಹೀಗೆ ಹೇಳುತ್ತಿದ್ದಾರಲ್ಲ ಎಂದು ಬಿಜೆಪಿಯನ್ನು ಲೇವಡಿ ಮಾಡಿದ್ದರು, ಇದಕ್ಕೆ ಸಿಎಂ ಬೊಮ್ಮಾಯಿ ಉತ್ತರಿಸುವ ವೇಳೆ, ಸ್ವಾಮಿ ಒಬ್ಬರು ಫ್ರೀಲ್ಯಾನ್ಸ್ ಪೊಲಿಟಿಶಿಯನ್ ಆದರೆ ಆರ್ಥಿಕ ತಜ್ಞರಾಗಿ ಜೀನಿಯಸ್ ಎಂದಿದ್ದರು.