ಜೈಪುರ್, ಸೆ.17 (DaijiworldNews/PY): ಪಾಕಿಸ್ತಾನದ ಹ್ಯಾಂಡ್ಲರ್ಗಳಿಗೆ ಭಾರತೀಯ ಸೇನೆಯ ಬಗ್ಗೆ ವ್ಯೂಹಾತ್ಮಕ ಛಾಯಾಚಿತ್ರಗಳು ಮತ್ತು ಸೂಕ್ಷ್ಮ ಮಾಹಿತಿಯನ್ನು ರವಾನಿಸಿದ್ದಾರೆ ಎನ್ನುವ ಆರೋಪದ ಮೇರೆಗೆ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಸಂದೀಪ್ ಕುಮಾರ್ (30) ಎಂದು ಗುರುತಿಸಲಾಗಿದೆ. ರಾಜಸ್ಥಾನ ಪೊಲೀಸ್ ಹಾಗೂ ಮಿಲಿಟರಿ ಗುಪ್ತಚರ ವಿಭಾಗದ ಜಂಟಿ ಕಾರ್ಯಾಚರಣೆಯಲ್ಲಿ ಗೂಢಚರ್ಯೆ ಆರೋಪದ ಮೇಲೆ ಈತನನ್ನು ಬಂಧಿಸಲಾಗಿದೆ.
ಸಂದೀಪ್ ಕುಮಾರ್, ಇಂಡೇನ್ ಅನಿಲ ಏಜೆನ್ಸಿಯ ಸ್ಥಳೀಯ ಎಲ್ಪಿಜಿ ಸಿಲಿಂಡರ್ ವಿತರಕನಾಗಿದ್ದನು. ಜುಂಜುನು ಜಿಲ್ಲೆಯ ನರ್ಹಾರ್ನಲ್ಲಿರುವ ಸೇನಾ ಶಿಬಿರಕ್ಕೆ ಎಲ್ಪಿಜಿ ಸಿಲಿಂಡರ್ಗಳನ್ನು ತಲುಪಿಸುವಾಗ ಅವರು ಭಾರತೀಯ ಸೇನೆಗೆ ಸಂಬಂಧಿಸಿದ ವ್ಯೂಹಾತ್ಮಕ ಮಾಹಿತಿ ಹಾಗೂ ಛಾಯಾಚಿತ್ರಗಳನ್ನು ಸೋರಿಕೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
"ನರ್ಹಾರ್ ಸೇನಾ ನೆಲೆಯ ಸೂಕ್ಷ್ಮ ಮಾಹಿತಿ ಹಾಗೂ ಛಾಯಾಚಿತ್ರಗಳನ್ನು ಸೋರಿಕೆ ಮಾಡಿದರೆ ಹಣ ನೀಡುತ್ತೇವೆ ಎಂದು ಪಾಕಿಸ್ತಾನದ ಹ್ಯಾಂಡ್ಲರ್ಗಳು ತಿಳಿಸಿದ್ದರು. ಸೆ.12ರಂದು ಆರೋಪಿಯನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ" ಎಂದು ಡಿಜಿಪಿ ಉಮೇಶ ಮಿಶ್ರಾ ಹೇಳಿದ್ದಾರೆ.
ಎಲ್ಲಾ ಏಜೆನ್ಸಿಗಳು ಜೈಪುರದಲ್ಲಿ ಜಂಟ ವಿಚಾರಣೆ ನಡೆಸಿದ ವೇಳೆ, ಜುಲೈನಲ್ಲಿ ಸಂದೀಪ್ ಕುಮಾರ್ ಭಾರತೀಯ ಸೇನೆಯ ಕುರಿತು ಸೂಕ್ಷ್ಮ ಮಾಹಿತಿ ಕೇಳಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಸಾಮಾಜಿಕ ಮಾಧ್ಯಮದ ಮುಖೇನ ಅವರು ಛಾಯಾಚಿತ್ರಗಳನ್ನು ಹಾಗೂ ಮಾಹಿತಿಯನ್ನು ಪಾಕ್ ಹ್ಯಾಂಡ್ಲರ್ಗಳಿಗೆ ರವಾನಿಸಿದ್ದರು ಎಂದು ಆರೋಪಿಸಲಾಗಿದೆ.