ಬೆಂಗಳೂರು, ಸೆ. 15 (DaijiworldNews/SM): ರಾಜ್ಯದಲ್ಲಿ ಬೆಲೆ ಎರಿಕೆಯಿಂದ ಜನರು ಕಂಗಾಲಾಗಿದ್ದು, ಇದನ್ನು ಮಾಜಿ ಸಿಎಂ ಕುಮಾರಸ್ವಾಮಿ ಟೀಕಿಸಿದ್ದಾರೆ. ಈಗಾಗಲೇ ಕೋವಿಡ್, ಲಾಕ್ ಡೌನ್ ಪರಿಸ್ಥಿತಿಯಿಂದ ಜನರು ಕಂಗಾಲಾಗಿದ್ದಾರೆ. ಈ ನಡುವೆ ಪೆಟ್ರೋಲ್, ಡೀಸೆಲ್, ಅನಿಲ ದರ ಏರಿಸುವ ಮೂಲಕ ಮತ್ತೊಂದು ಹೊರೆ ವಿಧಿಸಲಾಗಿದೆ. ಇದರಿಂದಾಗಿ ಬಡವರ ಮನೆಗೆ ಬೆಂಕಿ ಬಿದ್ದಂತಾಗಿದ್ದು, ಸರಕಾರ ತಕ್ಷಣಾ ಪರಿಹಾರ ಕ್ರಮ ಕೈಗೊಳ್ಳಬೇಕೆಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಗುರುವಾರ ವಿಧಾನಸಭೆಯ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದರು. ತೈಲ ಹಾಗೂ ಅಡುಗೆ ಅನಿಲ ಮತ್ತಿತರ ದಿನಬಳಕೆಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಗಾಯದ ಮೇಲೆ ಬರೆ ಎಳೆದಂತಾಗಿದೆ. ಜನರ ಕಷ್ಟಗಳಿಗೆ ನೆರವಾಗುವುದು ಸರಕಾರದ ಕೆಲಸವಾಗಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಎಚ್ಚೆತ್ತುಕೊಂಡು ಜನರ ಕಷ್ಟಕ್ಕೆ ನೆರವಾಗಬೇಕಾಗಿದೆ ಎಂದರು.
ಸಂಕಷ್ಟ ಸಂದರ್ಭದಲ್ಲಿ ಬೆಲೆ ಏರಿಕೆಯನ್ನೇ ರಾಜಕೀಯ ದಾಳವಾಗಿ ಬಳಸುವ ಬದಲು ಎಲ್ಲರೂ ಸರ್ಕಾರಕ್ಕೆ ಪಕ್ಷಾತೀತವಾಗಿ ಬೆಂಬಲ ನೀಡಬೇಕು ಎಂದು ಅವರು ತಿಳಿಸಿದ್ದಾರೆ.