ಬೆಂಗಳೂರು, ಸೆ.16 (DaijiworldNews/PY): "ಅಕ್ರಮ ಬಾಂಗ್ಲಾ ಹಾಗೂ ಅಕ್ರಮ ವಿದೇಶಿಗರ ಪತ್ತೆಗಾಗಿ ಸ್ಪೆಷಲ್ ಟಾಸ್ಕ್ಫೋರ್ಸ್ ಅನ್ನು ನಗರದಲ್ಲಿ ರಚಿಸಿದ್ದು, ಯಾವುದೇ ಗಾಬರಿಯಾಗುವ ಅಗತ್ಯವಿಲ್ಲ" ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
"190 ಜನ ಅಕ್ರಮ ವಿದೇಶಿ ನಿವಾಸಿಗರನ್ನು ಗುರುತಿಸಿದ್ದು, ಕ್ಯಾಂಪ್ಗಳಲ್ಲಿ ಅವರು ನೆಲೆಸಿದ್ದಾರೆ. ಅವರ ಚಲನವಲಗಳ ಮೇಲೆ ನಿಗಾ ವಹಿಸಲು ತಿಳಿಸಿದ್ದೇನೆ. ಎನ್ಐಎಯಿಂದ ವಿಶೇಷ ಕಾರ್ಯಾಚರಣೆ ನಡೆಸಿ ವಸತಿ ಸಮುಚ್ಚಯಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ. ವೀಸಾ ಅವಧಿ ಮುಗಿದು ವಾಸಿಸುತ್ತಿರುವ ಮಂದಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಈ ಬಗ್ಗೆ ಯಾವುದೇ ಆತಂಕ ಪಡಬೇಕಾಗಿಲ್ಲ" ಎಂದು ಹೇಳಿದ್ದಾರೆ.
"ಆಫ್ರಿಕನ್ ಪ್ರಜೆಗಳು ಕೂಡಾ ವೀಸಾ ಅವಧಿ ಮುಗಿದು ಇಲ್ಲಿದ್ದು, ಅವರ ವಿರುದ್ದ ಕೂಡಾ ಮೊಕದ್ದಮೆ ಹೂಡಲಾಗಿದೆ. ಆದರೆ, ಕರ್ನಾಟಕವನ್ನು ಧರ್ಮಛತ್ರ ಆಗುವುದಕ್ಕೆ ಬಿಡುವುದಿಲ್ಲ" ಎಂದಿದ್ದಾರೆ.