ಬೆಂಗಳೂರು ಸೆ 16 (DaijiworldNews/MS): ಸುಟ್ಟು ಹೋದ ಟಿಸಿಗಳನ್ನು (ಟ್ರಾನ್ಸ್ ಫಾರಂ) ಒಂದು ದಿನದೊಳಗೆ ಬದಲಿಸುವ ವ್ಯವಸ್ಥೆ ಜಾರಿಗೆ ತರಲಾಗುವುದು ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನೀಲ್ಕುಮಾರ್ ಹೇಳಿದ್ದಾರೆ.
ಅವರು ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಶಾಸಕ ಜಿ.ಕರುಣಾಕರ ರೆಡ್ಡಿ ಅವರ ಪ್ರಶ್ನೆಗೆ ಉತ್ತರಿಸಿ ಮಾತನಾಡಿದರು. ಇಂಧನ ಇಲಾಖೆಯಲ್ಲಿ ಸುಧಾರಣೆ ತರಲು ಕ್ರಮ ಕೈಗೊಳ್ಳಲಾಗುತ್ತಿದೆ. ಸುಟ್ಟು ಹೋದ ವಿದ್ಯುತ್ ಪರಿವರ್ತಕ 24 ಗಂಟೆಯೊಳಗೆ ಬದಲಿಸಲು ಸೂಚಿಸಲಾಗಿದೆ ಎಂದರು.
ರಾಜ್ಯಾದ್ಯಂತ ಈಗಾಗಲೇ 160 ಟ್ರಾನ್ಸ್ ಫಾರಂ ಬ್ಯಾಂಕ್ ಸ್ಥಾಪನೆ ಮಾಡಲಾಗಿದೆ. ಈಗಾಗಲೇ 159 ಕಡೆ ಟಿಸಿ ದುರಸ್ತಿ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿದ್ದು, ಇನ್ನು 10 ಕಡೆಗಳಲ್ಲಿ ಟಿಸಿ ದುರಸ್ತಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು.ಸುಟ್ಟುಹೋದ ಟಿಸಿಗಳ ದುರಸ್ತಿ ಮತ್ತು ಅದನ್ನು ಎಲ್ಲಿಗೆ ಕೊಂಡೊಯ್ಯಲಾಯಿತು ಎಂಬ ಮಾಹಿತಿಗಳನ್ನು ತಿಳಿಯಲು ಆಯಪ್ ನಿರ್ಮಾಣಕ್ಕೆ ಎಲ್ಲಾ ವಿದ್ಯುತ್ ಕಂಪನಿಗಳಿಗೆ ಸೂಚಿಸಲಾಗಿದ್ದು, 100 ದಿನದೊಳಗೆ ಇದು ಜಾರಿಯಾಗಲಿದೆ ಎಂದರು.
ಇದಕ್ಕೂ ಮುನ್ನ ಮಾತನಾಡಿದ ಶಾಸಕ ಕರುಣಾಕರ ರೆಡ್ಡಿ, ಲೋ ವೋಲ್ಟೇಜ್, ಟಿಸಿ ವಿಫಲತೆಯಿಂದ ಸುಟ್ಟು ಹೋದ ಕೃಷಿ ಪಂಪ್ಸೆಟ್ಗಳಿಗೆ ಹೊಣೆ ಯಾರು? ಅತಿವೃಷ್ಟಿ, ಅನಾವೃಷ್ಟಿ ಸೇರಿದಂತೆ ವಿವಿಧ ಸಮಸ್ಯೆಗಳೊಂದಿಗೆ ರೈತರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.