ನವದೆಹಲಿ, ಸೆ.16 (DaijiworldNews/PY): "ದೇಶದಲ್ಲಿ ಕೊರೊನಾ ಸೋಂಕಿನ ಹಾವಳಿಯ ತೀವ್ರತೆ ಇಳಿಮುಖವಾಗುವ ಹಂತದಲ್ಲಿದೆ. ಇದು ಆರು ತಿಂಗಳಿನಲ್ಲಿ ಸಾಮಾನ್ಯ ಸಮಸ್ಯೆ ಹಂತಕ್ಕೆ ಬರಲಿದೆ" ಎಂದು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ ನಿರ್ದೇಶಕ ಸುಜೀತ್ ಸಿಂಗ್ ಹೇಳಿದ್ದಾರೆ.
"ಕೊರೊನಾ ತೀವ್ರತೆ ತಗ್ಗಿ ಅದನ್ನು ನಿಭಾಯಿಸಲು ಸಾಧ್ಯವಿದೆ ಎನ್ನುವ ಪರಿಸ್ಥಿತಿ ನಿರ್ಮಾಣವಾಗಲಿರುವ ಕಾರಣ ದೇಶದ ಆರೋಗ್ಯ ಕ್ಷೇತ್ರದ ಮೇಲಿನ ಒತ್ತಡವೂ ಕೂಡಾ ತಗ್ಗಲಿದೆ" ಎಂದಿದ್ದಾರೆ.
ಲಸಿಕೆಯ ಮಹತ್ವದ ಬಗ್ಗೆ ಒತ್ತಿ ಹೇಳಿದ ಸಿಂಗ್, "ಜನರು ಕೊರೊನಾ ಲಸಿಕೆ ಪಡೆದುಕೊಳ್ಳುವುದು ಮುಖ್ಯ. ಇದರೊಂದಿಗೆ ಕೊರೊನಾ ಮಾಗಸೂಚಿಗಳನ್ನು ಅನುಸರಿಸುವುದು ಮುಖ್ಯ. ಶೇ. 20 ರಿಂದ 30ರಷ್ಟು ಪ್ರಕರಣಗಳಲ್ಲಿ ಸಂಪೂರ್ಣ ಲಸಿಕೆ ಪಡೆದ ಜನರು ಸೋಂಕಿಗೆ ಒಳಗಾಗುತ್ತಾರೆ. ವ್ಯಾಕ್ಸಿನೇಷನ್ ಮಾಡಿದ 70 ರಿಂದ 100 ದಿನಗಳಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗಲು ಆರಂಭವಾಗುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ" ಎಂದು ಅವರು ಹೇಳಿದ್ದಾರೆ.
"ದೇಶದಲ್ಲಿ 70 ಕೋಟಿ ಲಸಿಕೆ ಹಾಕಲಾಗಿದೆ. ಶೇ,.70ರಷ್ಟು ಲಸಿಕೆಯ ಪರಿಣಾಮಕಾರಿತನ ಇದೆ. ಸುಮಾರು 50 ಕೋಟಿ ಜನರು ವೈರಸ್ ವಿರುದ್ಧ ರೋಗನಿರೋಧಕ ಶಕ್ತಿಯನ್ನು ಹೊಂದಿದ್ದಾರೆ" ಎಂದಿದ್ದಾರೆ.
"ಒಂದು ಡೋಸ್ ಪಡೆದುಕೊಂಡರೆ ಸುಮಾರು 30 ಪ್ರತಿಶತದಷ್ಟು ರೋಗ ನಿರೋಧಕ ಶಕ್ತಿಯನ್ನು ಓರ್ವ ವ್ಯಕ್ತಿ ಪಡೆಯಬಹುದು. ಒಂದು ಡೋಸ್ ಲಸಿಕೆ ಪಡೆದ 30 ಕೋಟಿ ಜನರನ್ನು ಸಹ ರೋಗನಿರೋಧಕ ಶಕ್ತಿ ಹೊಂದಿರುವವರು ಎಂದು ಪರಿಗಣಿಸಲಾಗುತ್ತದೆ" ಎಂದು ತಿಳಿಸಿದ್ದಾರೆ.
"ಭಾರತದಲ್ಲಿ ಯಾವುದೇ ಹೊಸ ರೂಪಾಂತರವಿಲ್ಲ. ದೇಶದಲ್ಲಿ C1.2 ಹಾಗೂ Mu ತಳಿಗಳು ಕಂಡುಬಂದಿಲ್ಲ. ಒಂದು ಹೊಸ ರೂಪಾಂತರವು ಮೂರನೇ ಅಲೆಯನ್ನು ಉಂಟುಮಾಡುವುದಿಲ್ಲ. ಮುಂಬರುವ ಹಬ್ಬದ ಹೊತ್ತಿಗೆ ನಾವು ಸಾಕಷ್ಟು ಎಚ್ಚರಿಕೆ ವಹಿಸುವುದು ಮುಖ್ಯ" ಎಂದಿದ್ದಾರೆ.