ನವದೆಹಲಿ, ಸೆ.16 (DaijiworldNews/PY): ಸಿಪಿಐ ಯುವ ನಾಯಕ ಹಾಗೂ ಜೆಎನ್ಯು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಭೇಟಿ ಮಾಡಿದ್ದು, ಕಾಂಗ್ರೆಸ್ ಪ್ರವೇಶದ ಬಗ್ಗೆ ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ, ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಕೂಡಾ ಕಾಂಗ್ರೆಸ್ ನಾಯಕತ್ವದೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮೇವಾನಿಗೆ ಉತ್ತರ ಗುಜರಾತ್ನ ಬನಸ್ಕಾಂತ ಜಿಲ್ಲೆಯ ವಡ್ಗಾಮ್ ಕ್ಷೇತ್ರದಿಂದ ತನ್ನ ಅಭ್ಯರ್ಥಿಯನ್ನು ನಿಲ್ಲಿಸದೇ ಅವರ ಗೆಲುವಿಗೆ ಸಹಾಯ ಮಾಡಿತ್ತು.
ಸಿಪಿಐಯಲ್ಲಿ ಉಸಿರುಗಟ್ಟಿದ ಭಾವನೆ ಇದೆ ಎಂದು ಕನ್ಹಯ್ಯ ಕುಮಾರ್ ಅವರ ಆಪ್ತ ಮೂಲಗಳು ಹೇಳಿವೆ. ಕುಮಾರ್ ಅವರು ಮಂಗಳವಾರ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದು, ಕಾಂಗ್ರೆಸ್ ಪ್ರವೇಶದ ಬಗ್ಗೆ ಇಬ್ಬರೂ ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ.
ಕನ್ಹಯ್ಯ ಕುಮಾರ್ ಅವರ ನಿರ್ಗಮನದ ಬಗ್ಗೆ ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ ರಾಜಾ ಅವನ್ನು ಕೇಳಿದಾಗ, "ಈ ವಿಚಾರಕ್ಕೆ ಸಂಬಂಧಪಟ್ಟಂತೆ ಊಹಾಪೋಹಾಗಳನ್ನು ಮಾತ್ರವೇ ಕೇಳಿದ್ದೇನೆ. ಈ ತಿಂಗಳ ಆರಂಭದಲ್ಲಿ ಅವರು ನಮ್ಮ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಹಾಜರಿದ್ದರು ಎಂದು ಮಾತ್ರವೇ ನಾನು ಹೇಳಬಲ್ಲೆ. ಸಭೆಯಲ್ಲಿ ಅವರು ಮಾತನಾಡಿದ್ದರು ಹಾಗೂ ಭಾಗವಹಿಸಿದ್ದರು" ಎಂದಿದ್ದಾರೆ.
ಕನ್ಹಯ್ಯ ಕುಮಾರ್ ಹಾಗೂ ಮೇವಾನಿ ಅವರ ಸೇರ್ಪಡೆಯಿಂದ ಕಾಂಗ್ರೆಸ್ ಪಕ್ಷದ ಯುವ ಕಾರ್ಯಕರ್ತರಲ್ಲಿ ಹೊಸ ಶಕ್ತಿ ಬರಲಿದೆ ಎಂದು ನಂಬಲಾಗಿದೆ.