ಬೆಂಗಳೂರು, ಸೆ 16(DaijiworldNews/MS): ರಾಜ್ಯದ ಹಲವು ದೇವಾಲಯಗಳನ್ನು ನೆಲಸಮ ಮಾಡುವ ವಿಚಾರದಲ್ಲಿ ಉಂಟಾಗಿರುವ ಗೊಂದಲ, ವ್ಯಾಪಕ ವಿರೋಧ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಪ್ರತಿಕ್ರಿಯಿಸಿ ಮಾತನಾಡಿದ್ದು ಧಾರ್ಮಿಕ ಕಟ್ಟಡನೆಲಸಮ ವಿಚಾರವಾಗಿ ಸುಪ್ರೀಂ ಕೋರ್ಟ್ ನಿರ್ದೇಶನ ಹಾಗೂ ಅದರ ಸಾಧಕ ಬಾಧಕಗಳನ್ನು ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು. ಎರಡು ದಿನಗಳಲ್ಲಿ ಈ ವಿಚಾರ ತೀರ್ಮಾನ ಆಗಲಿದೆ ಎಂದು ಹೇಳಿದ್ದಾರೆ.
ದೇವಸ್ಥಾನ ನೆಲಸಮ ವಿರೋಧಿಸಿ ಹಿಂದೂ ಪರ ಸಂಘಟನೆಗಳಿಂದ ಎಲ್ಲಾ ಕಡೆ ಪ್ರತಿಭಟನೆ, ಹೋರಾಟ ನಡೆಯುತ್ತಿರುವ ಬಗ್ಗೆ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿ ಮಾತನಾಡಿದ ಅವರು ಸದ್ಯಕ್ಕೆ ದೇವಾಲಯ ನೆಲಸಮ ವಿಚಾರಕ್ಕೆ ಸಿಎಂ ತಾತ್ಕಾಲಿಕ ತಡೆ ನೀಡಿದ್ದಾರೆ.ಈ ಬೆಳವಣಿಗೆಗಳಿಂದ ಸರ್ಕಾರಕ್ಕೆ ಮುಜುಗರ ಉಂಟಾಗುವ ಪ್ರಶ್ನೆಯೇ ಬರಲ್ಲ. ಎರಡು ದಿನಗಳಲ್ಲಿ ಎಲ್ಲವೂ ಸುಖಾಂತ್ಯ ಆಗಲಿದೆ ಎಂದರು
ಹುಚ್ಚಗಣಿ ದೇಗುಲ ನೆಲಸಮ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈಗಾಗಲೇ ಇದು ಸಿಎಂ ಹಾಗೂ ಕಂದಾಯ ಸಚಿವರ ಗಮನಕ್ಕೆ ಬಂದಿದೆ. ಜಿಲ್ಲಾಡಳಿತಕ್ಕೆ ಸರ್ಕಾರ ನೊಟೀಸ್ ನೀಡಿದೆ. ನೊಟೀಸ್ ಗೆ ಉತ್ತರ ಬಂದ ಬಳಿಕ ಅಧಿಕಾರಿಗಳ ಮೇಲೆ ಕ್ರಮ ಜರುಗಿಸುವ ವಿಚಾರವನ್ನು ಸಿಎಂ ನಿರ್ಧರಿಸುತ್ತಾರೆ ಎಂದರು.