ಬೆಂಗಳೂರು, ಸೆ.16 (DaijiworldNews/PY): "ರಾಜ್ಯದ ಪಶು ಆಸ್ಪತ್ರೆಗಳಲ್ಲಿ ಖಾಲಿ ಇರುವ 600 ಪಶು ವೈದ್ಯರ ನೇರ ನೇಮಕಾತಿ ಮಾಡಿಕೊಳ್ಳಲು ಕ್ರಮ ತೆಗೆದುಕೊಳ್ಳಲಾಗಿದೆ" ಎಂದು ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ರಾಜ್ಯದ ಗ್ರಾಮ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಪಶಿ ಚಿಕಿತ್ಸಾಲಯಗಳಲ್ಲಿ ವೈದ್ಯರು ಸೇರಿದಂತೆ ವಿವಿಧ ಹಂತದ ಹುದ್ದೆಗಳು ಖಾಲಿ ಇವೆ. 600 ವೈದ್ಯರ ನೇಮಕಾತಿ ಬಗ್ಗೆ ಈಗಾಗಲೇ ಸಿಎಂ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚೆ ನಡೆಸಿದ್ದೇನೆ. ಈ ಕುರಿತು ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದೇನೆ" ಎಂದಿದ್ದಾರೆ.
"1821 ಬೋಧಕ ಹಾಗೂ ಬೋಧಕೇತರ ಹುದ್ದೆಗಳು ಪಶು ವೈದ್ಯಕೀಯ ವಿವಿಯಲ್ಲಿ ಮಂಜೂರಾಗಿವೆ. ಇದರಲ್ಲಿ 1,292 ಹುದ್ದೆಗಳು ಖಾಲಿ ಇವೆ. ಹಾಗಾಗಿ ಸರ್ಕಾರ ಈಗಾಗಲೇ ಖಾಲಿ ಇರುವ ಹುದ್ದೆಗಳಲ್ಲಿ 390 ಬೋಧಕ ಹಾಗೂ 226 ಬೋಧಕೇತರ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲು ಅನುಮತಿ ಕಲ್ಪಿಸಿದೆ" ಎಂದು ತಿಳಿಸಿದ್ದಾರೆ.