ಪಾಲಕ್ಕಾಡ್, ಸೆ.16 (DaijiworldNews/PY): ಯಾರಿಗೂ ತಿಳಿಯದಂತೆ ಪ್ರೇಯಸಿಯನ್ನು 10 ವರ್ಷಗಳ ಕಾಲ ತನ್ನ ಮನೆಯ ಒಂಟಿ ಕೋಣೆಯಲ್ಲಿ ಬಚ್ಚಿಟ್ಟು ಸುದ್ದಿಯಾಗಿದ್ದ ವ್ಯಕ್ತಿ, ಕೊನೆಗೂ ಆಕೆಯನ್ನು ವಿವಾಹವಾಗಿದ್ದಾನೆ.
ರೆಹಮಾನ್ ಎಂಬಾತ ತನ್ನ ಪ್ರೇಯಸಿ ಸಾಜಿತಾ ಎಂಬಾಕೆಯನ್ನು ಹತ್ತು ವರ್ಷಗಳ ಕಾಲ ಬಚ್ಚಿಟ್ಟಿದ್ದ ಎಂದು ಸುದ್ದಿಯಾಗಿದ್ದು. ಬುಧವಾರ ಇಬ್ಬರು ಪಾಲಕ್ಕಾಡ್ ನೇನ್ಮರದಲ್ಲಿ ರಿಜಿಸ್ಟರ್ ವಿವಾಹವಾಗಿದ್ದಾರೆ.
ಸಜಿತಾ ಸರಳವಾದ ಹತ್ತಿ ಸಲ್ವಾರ್ ಧರಿಸಿದ್ದು, ರೆಹಮಾನ್ ಸಾಂಪ್ರದಾಯಿಕ ಧೋತಿ ಹಾಗೂ ಶರ್ಟ್ನಲ್ಲಿ ಕಾಣಿಸಿಕೊಂಡಿದ್ದು, ಇಬ್ಬರು ಜೊತೆಯಾಗಿ ವಿವಾಹ ದಾಖಲೆಗಳಿಗೆ ಸಹಿಹಾಕಿದ್ದಾರೆ. ವಿವಾಹದ ಬಳಿಕ ಎಲ್ಲರಿಗೂ ಸಿಹಿ ಹಂಚಿ ತಮ್ಮನ್ನು ಬೆಂಬಲಿಸಿದ್ದಕ್ಕೆ ಧನ್ಯವಾದ ತಿಳಿಸಿದ್ದಾರೆ.
ಬಳಿಕ ಮಾತನಾಡಿದ ರೆಹಮಾನ್, ನಾವಿಬ್ಬರು ಸಂತೋಷ ಹಾಗೂ ಶಾಂತಿಯುತ ಜೀವನ ನಡೆಸಬೇಕು ಎಂದು ಇಚ್ಛಿಸಿದ್ದೇವೆ ಎಂದು ಹೇಳಿದ್ದಾರೆ.
ಸಾಜಿತಾ ಕುಟುಂಬ ವಿವಾಹಕ್ಕೆ ಸಾಕ್ಷಿಯಾಗಿತ್ತು. ಆದರೆ, ರೆಹಮಾನ್ ಕುಟುಂಬಕ್ಕೆ ವಿವಾಹ ಇಷ್ಟವಿಲ್ಲದ ಕಾರಣ ಅವರು ಅಂತರ ಕಾಯ್ದುಕೊಂಡಿದ್ದರು. ವಿವಾದಲ್ಲಿ ನೇನ್ಮಾರಾ ಶಾಸಕ ಕೆ. ಬಾಬು ಕೂಡಾ ಪಾಲ್ಗೊಂಡಿದ್ದು, ಜೋಡಿಗೆ ಶುಭ ಹಾರೈಸಿದ್ದು, ಸ್ವಂತ ಮನೆ ಕಟ್ಟಿಕೊಳ್ಳುವ ಅವರ ಆಸೆಯನ್ನು ನೆರವೇರಿಸಿ ಕೊಡುವುದಾಗಿ ಭರವಸೆ ನೀಡಿದ್ದಾರೆ.
ಘಟನೆಯ ಹಿನ್ನೆಲೆ:
2010ರ ಫೆಬ್ರವರಿ 2ರಂದು ಕೇರಳದ ಪಲಕ್ಕಾಡ್ ಜಿಲ್ಲೆಯ ಅರಿಯೂರು ಸಮೀಪದ ಕರೈಕ್ಕಟ್ಟುಪರಂಬು ಗ್ರಾಮದಲ್ಲಿ 19 ವರ್ಷದ ಸಾಜಿತಾ ನಾಪತ್ತೆಯಾಗಿದ್ದಳು. ಮಗಳಿಗಾಗಿ ಪೋಷಕರು ಎಷ್ಟೇ ಹುಡುಕಾಡಿದರೂ ಕೂಡಾ ಮಗಳು ಪತ್ತೆಯಾಗಿರಲಿಲ್ಲ. ಕೊನೆಗೆ ಪೋಷಕರು ಪೊಲೀಸ್ ಠಾಣೆಯಲ್ಲಿ ಸಾಜಿತಾ ನಾಪತ್ತೆ ಕೇಸ್ ದಾಖಲಿಸಿದ್ದರು.
ಆದರೆ, ಸಾಜಿತಾ ಅದೇ ಗ್ರಾಮದ ಯುವಕ ಆಕೆಯ ಪ್ರಿಯಕರ ರೆಹಮಾನ್ ಮನೆಯಲ್ಲಿ ಇದ್ದಳು. ಅಂದು ನಾಪತ್ತೆಯಾಗಿದ್ದ ಸಾಜಿತಾಳನ್ನು ರೆಹಮಾಣ್ ತನ್ನ ಮನೆಯಲ್ಲಿಯ ಕೋಣೆಯೊಂದರಲ್ಲಿ ಅಡಗಿಸಿಟ್ಟಿದ್ದ. ಆದರೆ, ಈ ಬಗ್ಗೆ ಯಾರಿಗೂ ತಿಳಿದೇ ಇರಲಿಲ್ಲ. ರಾತ್ರಿ ಮನೆಯಲ್ಲಿ ಎಲ್ಲರೂ ಮಲಗಿದ ಬಳಿಕ ಆತ ಕಿಟಕಿಯ ಮೂಲಕ ಆಕೆಯನ್ನು ಸ್ನಾನಗೃಹಕ್ಕೆ, ಶೌಚಗೃಹಕ್ಕೆ ಕರೆದೊಯ್ಯುತ್ತಿದ್ದ. ತಾನು ಕೋಣೆಯಲ್ಲಿ ಊಟ ಮಾಡುತ್ತೇನೆ ಎಂದು ತಟ್ಟೆಗೆ ಊಟ ಹಾಕಿಕೊಂಡು ಹೋಗುತ್ತಿದ್ದವನು ತನ್ನ ಪ್ರೇಯಸಿಗೆ ಊಟ ನೀಡುತ್ತಿದ್ದ. ಅಲ್ಲದೇ, ರೆಹಮಾನ್ ತನ್ನ ಕೋಣೆಗೆ ಯಾರಿಗೂ ಪ್ರವೇಶ ನೀಡುತ್ತಿರಲಿಲ್ಲ. ಮನೆಯವರು ಪ್ರಶ್ನಿಸುವುದನ್ನು ತಪ್ಪಿಸಲು ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದ. ಈ ಕಾರಣದಿಂದ ಮನೆಯವರು ಆತನ ಬಳಿ ಸುಳಿಯುತ್ತಿರಲಿಲ್ಲ. ಕೆಲಸಕ್ಕೆ ಹೋದರೂ ಕೂಡಾ ಬೇಗ ಮನೆಗೆ ಬಂದು ಸೇರಿಕೊಳ್ಳುತ್ತಿದ್ದ.
ರೆಹಮಾನ್ ಮೂರು ತಿಂಗಳ ಹಿಂದೆ ನಾಪತ್ತೆಯಾಗಿದ್ದ. ಈ ಬಗ್ಗೆ ಆತಂಕಗೊಂಡಿದ್ದ ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇತ್ತೀಚೆಗೆ ರೆಹಮಾನ್ ತನ್ನ ಸಹೋದರನ ಕಣ್ಣಿಗೆ ಬಿದ್ದಿದ್ದ. ಈ ವಿಚಾರ ಪೊಲೀಸರಿಗೆ ತಿಳಿಯುತ್ತಿದ್ದಂತೆ ಪೊಲೀಸರು ರೆಹಮಾನ್ನನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ ವೇಳೆ ನಿಜ ವಿಚಾರ ಬಯಲಾಗಿದೆ.