ದಾವಣಗೆರೆ, ಸೆ 16(DaijiworldNews/MS): ಗ್ರಾಮಕ್ಕೆ ರಸ್ತೆ ಸೌಕರ್ಯ ಬರುವವರೆಗೆ ಮದುವೆ ಆಗಲ್ಲ ಎಂದು ಶಪಥ ಕೈಗೊಂಡಿದ್ದ ದಾವಣಗೆರೆಯ ಯುವತಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಂದಿಸಿದ್ದು, ಗ್ರಾಮಕ್ಕೆ ರಸ್ತೆ ನಿರ್ಮಾಣ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿ ಸಿಎಂ ಕಾರ್ಯದರ್ಶಿ ಪತ್ರ ರವಾನಿಸಿದ್ದಾರೆ.
ದಾವಣಗೆರೆಯ ಮಾಯಕೊಂಡ ಹೋಬಳಿಯ ಸಮೀಪದ ಶ್ರೀ ರಾಂಪುರ ಎಂಬ ಗ್ರಾಮದಲ್ಲಿ ರಸ್ತೆ ಮಾತ್ರವಲ್ಲ ಯಾವುದೇ ಮೂಲಭೂತ ಸೌಕರ್ಯವಿಲ್ಲ. ಮೊಬೈಲ್ ನೆಟ್ವರ್ಕ್ ಇಲ್ಲ. ಬಸ್ ವ್ಯವಸ್ಥೆ ಇಲ್ಲದೆ ಕಳೆದ 75 ವರ್ಷಗಳಿಂದ ಹೇಗೆ ಇದೆಯೋ ಅದೇ ರೀತಿ ಇನ್ನು ಇದೆ. ಎಚ್. ರಾಂಪುರ ಗ್ರಾಮಕ್ಕೆ ಬಂದು ಹೋಗಲು ರಸ್ತೆ ಇಲ್ಲದ ಕಾರಣ ಸಾರಿಗೆ ವ್ಯವಸ್ಥೆಯೂ ಇಲ್ಲ ಹೀಗಾಗಿ ಈ ಗ್ರಾಮದ ಯುವಕ-ಯುವತಿಯರು ಮದುವೆಯಾಗದೆ ಕಷ್ಟ ಪಡುವಂತಾಗಿದೆ. ರಸ್ತೆಯಿಲ್ಲದೆ ಬಸ್ ಬರಲ್ಲ ಕುಗ್ರಾಮದ ಸಂಬಂಧ ಬೇಡ ಎಂದು ಜನ ಹಿಂದೇಟು ಹಾಕುತ್ತಿದ್ದಾರೆ. ಆದ್ದರಿಂದ ಹೆಚ್ ರಾಂಪುರಕ್ಕೆ ರಸ್ತೆಯಾಗುವವರೆಗೂ ನಾನು ಮದುವೆ ಆಗಲ್ಲ ಎಂದು ಈ ಗ್ರಾಮದ ಸ್ನಾತಕೋತ್ತರ ಪದವೀಧರೆ ಆರ್.ಡಿ.ಬಿಂದು ಪಟ್ಟು ಹಿಡಿದಿದ್ದಾಳೆ.
ಸಿಎಂ, ಪಿಎಂ ವರೆಗೂ ಪತ್ರ ಬರೆದರೂ ಕೂಡ ನಮ್ಮೂರಿನ ಒಂದೂವರೆ ಕಿಲೋ ಮೀಟರ್ ರಸ್ತೆ ನಿರ್ಮಾಣಕ್ಕೆ ಮುಂದಾಗಿಲ್ಲಎಂದು ಬೇಸರ ವ್ಯಕ್ತಪಡಿಸಿದ್ದಾರೆ. ವರ್ಷಗಳಿಂದಲೂ ಸರ್ಕಾರಕ್ಕೆ, ಜನಪ್ರತಿನಿಧಿಗಳಿಗೆ ಪತ್ರ ಬರೆಯುತ್ತಲೇ ಬಂದಿದ್ದ ಬಿಂದು ಕೆಲ ದಿನಗಳ ಹಿಂದ ಮಾಡಿದ್ದ ಇ-ಮೇಲ್ ಗೆ ಸಿಎಂ ಬೊಮ್ಮಾಯಿ ಸರ್ಕಾರ ಸ್ಪಂದಿಸಿದ್ದು, ಎಚ್. ರಾಂಪುರ ಗ್ರಾಮಕ್ಕೆ ರಸ್ತೆ ನಿರ್ಮಾಣ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿ ಸಿಎಂ ಕಾರ್ಯದರ್ಶಿ ಪತ್ರ ರವಾನಿಸಿದ್ದಾರೆ.