ನವದೆಹಲಿ, ಸೆ 16(DaijiworldNews/MS): ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು (ಆರ್ಎಸ್ಎಸ್) "ನಕಲಿ ಹಿಂದುಗಳು" ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕರೆದಿದ್ದಾರೆ.
ಬಿಜೆಪಿ - ಆರ್ಎಸ್ಎಸ್ ವಿರುದ್ಧ ಆಕ್ರೋಶ ಹೊರಹಾಕಿರುವ ರಾಹುಲ್ ಗಾಂಧಿ, ಈ ನಕಲಿ ಹಿಂದುಗಳು ಧರ್ಮವನ್ನು ತಮ್ಮ ಲಾಭಕ್ಕಾಗಿ ಮಾತ್ರ ಬಳಸುತ್ತಾರೆ ಎಂದು ಆರೋಪಿಸಿದ್ದಾರೆ.
ದೆಹಲಿಯಲ್ಲಿ ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಸ್ಥಾಪನಾ ದಿನವನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಕಾಂಗ್ರೆಸ್ನ ಸಿದ್ಧಾಂತವು ಆರ್ಎಸ್ಎಸ್ ಮತ್ತು ಬಿಜೆಪಿ ಸಿದ್ಧಾಂತಕ್ಕೆ ಸಂಪೂರ್ಣ ವಿರುದ್ಧವಾಗಿದೆ ಮತ್ತು "ಎರಡು ಸಿದ್ಧಾಂತಗಳಲ್ಲಿ ಒಂದು ಮಾತ್ರ ದೇಶವನ್ನು ಆಳಬಲ್ಲದು" ಎಂದು ಹೇಳಿದರು.
"ಇವರೆಲ್ಲ ಯಾವ ರೀತಿಯ ಹಿಂದೂಗಳು ? ಇವರೆಲ್ಲ ನಕಲಿ ಹಿಂದೂಗಳಾಗಿದ್ದಾರೆ. ಇವರು ಹಿಂದೂ ಧರ್ಮವನ್ನು ಬಳಸಿಕೊಳ್ತಿದ್ದಾರೆ, ಧರ್ಮವನ್ನು ಬಳಸಿ ದಲ್ಲಾಳಿತನವನ್ನು ಮಾಡುತ್ತಿದ್ದಾರೆ. ಇವರ್ರ್ಯಾರು ನಿಜವಾದ ಹಿಂದೂಗಳೇ ಅಲ್ಲ" ಎಂದು ಹೇಳುವ ಮೂಲಕ ಬಿಜೆಪಿ ಹಾಗೂ ಆರ್.ಎಸ್.ಎಸ್.ನ್ನು ಜರಿದಿದ್ದಾರೆ.
ಬಿಜೆಪಿ-ಆರ್ಎಸ್ಎಸ್ ನವರು ತಮ್ಮದು ಹಿಂದುತ್ವ ಎಂದು ಹೇಳುತ್ತಾರೆ. ಕಳೆದ 100-200 ವರ್ಷಗಳಲ್ಲಿ, ಯಾರಾದರೂ ಹಿಂದೂ ಧರ್ಮವನ್ನು ಉತ್ತಮ ರೀತಿಯಲ್ಲಿ ಅರ್ಥಮಾಡಿಕೊಂಡಿ ಅದನ್ನು ಅಳವಡಿಸಿಕೊಂಡಿದ್ದಾರೆ ಅದು ಮಹಾತ್ಮ ಗಾಂಧಿ ಮಾತ್ರ . ಒಂದು ವೇಳೆ, ಮಹಾತ್ಮ ಗಾಂಧಿಯವರು ಹಿಂದೂ ಧರ್ಮವನ್ನು ಅರ್ಥಮಾಡಿಕೊಂಡಿದ್ದರೆ ಮತ್ತು ಅದನ್ನು ಅರ್ಥಮಾಡಿಕೊಳ್ಳಲು ತಮ್ಮ ಇಡೀ ಜೀವನವನ್ನು ಕಳೆದರೆ, ಆರೆಸ್ಸೆಸ್ ಸಿದ್ಧಾಂತವು ಅವರ ಎದೆಗೆ ಮೂರು ಗುಂಡುಗಳನ್ನು ಏಕೆ ಹಾಕಿತ್ತು ಎಂದು ಪ್ರಶ್ನಿಸಿದ್ದಾರೆ.