ಬೆಂಗಳೂರು, ಸೆ.15 (DaijiworldNews/PY): "ಇಂಧನ ತೈಲಗಳ ಬೆಲೆ ಏರಿಕೆಯಿಂದ ಅಗತ್ಯ ವಸ್ತುಗಳ ಬೆಲೆ ಏರಲಿಲ್ಲ ಎಂಬಂತೆ ಮಾತನಾಡುವ ಕನಿಷ್ಠ ಜ್ಞಾನವಿಲ್ಲದ ಬಿಜೆಪಿ ಗಾಂಪರಿಗೆ ಆಡಳಿತ ನಡೆಸುವ ಯಾವ ಯೋಗ್ಯತೆಯೂ ಇಲ್ಲ" ಎಂದು ಕಾಂಗ್ರೆಸ್ ಹೇಳಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, "ಸದನದಲ್ಲಿ ಬೆಲೆ ಏರಿಕೆಯ ಸಂಕಷ್ಟದ ಬಗ್ಗೆ ಕಾಂಗ್ರೆಸ್ ಗಮನ ಸೆಳೆಯುತ್ತಿದ್ದರೂ ಬಿಜೆಪಿ ನಾಯಕರು ಬಾಲಿಶ ಮಾತುಗಳನ್ನಾಡಿ ತಮ್ಮ ಜನ ವಿರೋಧಿ ಧೋರಣೆಯನ್ನು ನಿರೂಪಿಸಿದ್ದಾರೆ. ಇಂಧನ ತೈಲಗಳ ಬೆಲೆ ಏರಿಕೆಯಿಂದ ಅಗತ್ಯ ವಸ್ತುಗಳ ಬೆಲೆ ಏರಲಿಲ್ಲ ಎಂಬಂತೆ ಮಾತನಾಡುವ ಕನಿಷ್ಠ ಜ್ಞಾನವಿಲ್ಲದ ಬಿಜೆಪಿ ಗಾಂಪರಿಗೆ ಆಡಳಿತ ನಡೆಸುವ ಯಾವ ಯೋಗ್ಯತೆಯೂ ಇಲ್ಲ" ಎಂದಿದೆ.
"2018-19ರಲ್ಲಿ ಕೃಷಿಯಿಂದ ದೇಶದ ರೈತನ ಒಂದು ದಿನದ ಸರಾಸರಿ ಆದಾಯ ಕೇವಲ 27 ರೂಪಾಯಿ ಮಾತ್ರ, ಇದು ನರೇಗಾ ಕೂಲಿಗಿಂತಲೂ ಅತೀ ಕನಿಷ್ಠ. ರೈತರ ಆದಾಯ ಡಬಲ್ ಮಾಡುತ್ತೇವೆಂದ ಪ್ರಧಾನಿ ನರೇಂದ್ರ ಮೋದಿ ಅವರು ರೈತನನ್ನು ಬದುಕಲಾರದ ಹಂತಕ್ಕೆ ತಂದಿದ್ದಾರೆ, ಹೀಗೆ ರೈತರನ್ನು ದುರ್ಬಲಗೊಳಿಸಿ ಕಾರ್ಪೊರೇಟ್ ಕಂಪೆನಿಗಳ ಗುಲಾಮರನ್ನಾಗಿಸುವ ಹುನ್ನಾರ ನಡೆಸಿದ್ದಾರೆ" ಎಂದು ಕಾಂಗ್ರೆಸ್ ಆರೋಪಿಸಿದೆ.
"ಇದು ಸ್ಮಾರ್ಟ್ ಸಿಟಿ ಅಲ್ಲ, ಬಿಜೆಪಿಯ ಸ್ಮಾರ್ಟ್ ಲೂಟಿ! ಸ್ಮಾರ್ಟ್ ಸಿಟಿ ಹೆಸರಲ್ಲಿ ಬಿಜೆಪಿ ಸರ್ಕಾರದ ಸಹಕಾರದಲ್ಲಿಯೇ ಗುತ್ತಿಗೆದಾರರು ಕಳಪೆ ಕಾಮಗಾರಿ ಮಾಡುತ್ತಿದ್ದಾರೆ, ಆರ್ ಅಶೋಕ್ ಅವರೇ ಕಳಪೆ ಕಾಮಗಾರಿಯನ್ನು ಒಪ್ಪಿದರೂ ತಡೆಗಟ್ಟುವ ಕ್ರಮ ಕೈಗೊಂಡಿಲ್ಲ. ಇದು ಬಿಜೆಪಿ ಪ್ರೇರಿತ ಹಗರಣ ಎಂಬುದು ನಿಸ್ಸಂಶಯ" ಎಂದಿದೆ.
"ನಾ ಖಾವುಂಗಾ, ನಾ ಖಾನೆದುಂಗ" ಎನ್ನುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನ ಸ್ಮಾರ್ಟ್ ಸಿಟಿ ಹೆಸರಲ್ಲಿ ನಡೆದಿರುವ ಸ್ಮಾರ್ಟ್ ಲೂಟಿ ಬಗ್ಗೆ ಕ್ರಮ ಕೈಗೊಳ್ಳದೆ "ಮೇ ಸಭಿ ಕೋ ಖಾನೆದುಂಗ" ಎಂಬಂತೆ ನಡೆದುಕೊಳ್ಳುತ್ತಿದ್ದಾರೆ! ಈ ಹಗರಣದಲ್ಲಿ ಬಿಜೆಪಿ ಸರ್ಕಾರವೂ ಬಾಗಿಯಾಗಿದೆ, ಇದರ ತನಿಖೆಗೂ ವಹಿಸದೆ ಸುಮ್ಮನಿರುವುದೇಕೆ ಚೌಕಿದಾರ್? ಎಂದು ಪ್ರಶ್ನಿಸಿದೆ.