ಬೆಂಗಳೂರು, ಸೆ.15 (DaijiworldNews/PY): "ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ಪ್ರಜ್ಞೆಯೇ ಇಲ್ಲದಂತೆ ಆಡಳಿತ ನಡೆಸುತ್ತಿರುವ ಬಿಜೆಪಿ ಜನರ ಪಾಲಿಗೆ ನಿಜವಾದ ಪಾಪಿಗಳ ಸರ್ಕಾರವಾಗಿದೆ" ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಕಾಂಗ್ರೆಸ್ ಮಾಡಿದ ಪಾಪದ ಸಾಲ ತೀರಿಸಲು ಅಗತ್ಯ ವಸ್ತುಗಳ ಬೆಲೆ ಜಾಸ್ತಿಯಾಗಿದೆ ಎಂದಿರೋ ಸಿ ಟಿ ರವಿ ಅರೆಹುಚ್ಚನಂತೆ ವರ್ತಿಸುತ್ತಿದ್ದಾರೆ. ಪೊಳ್ಳು ಮಾತುಗಳಿಂದಲೇ ಕುಖ್ಯಾತಿಗೊಂಡಿರುವ ರವಿ, 2014 ರಲ್ಲಿ 54.90 ಕೋಟಿಯಿದ್ದ ಕೇಂದ್ರದ ಸಾಲ, ಕೇವಲ 7 ವರ್ಷಗಳಲ್ಲಿ 85 ಲಕ್ಷ ಕೋಟಿ ದಾಟಿದ್ದು ಹೇಗೆ? ಇದು ಯಾರ ಪಾಪದ ಸಾಲ ಎಂದು ಹೇಳಲಿ" ಎಂದಿದ್ದಾರೆ.
"ಯುಪಿಎ ಅವಧಿಯಲ್ಲಿ ಕಚ್ಛಾತೈಲದ ಬೆಲೆಯೇರಿದಾಗ, ಹೊರೆ ತಪ್ಪಿಸಲು 1ಲಕ್ಷದ 34 ಸಾವಿರ ಕೋಟಿಯ ತೈಲ ಬಾಂಡ್ ಖರೀದಿಸಲಾಗಿತ್ತು. ಕಳೆದ 7ವರ್ಷಗಳಲ್ಲಿ ತೈಲದ ಮೇಲಿನ ತೆರಿಗೆಯಿಂದಲೇ 23 ಲಕ್ಷ ಕೋಟಿಗೂ ಹೆಚ್ಚು ಸಂಗ್ರಹಿಸಿದೆ. ಇದರಲ್ಲಿ ತೈಲಬಾಂಡ್ಗೆ ಪಾವತಿಸಿರುವುದು 9 ಸಾವಿರ ಕೋಟಿ ಮಾತ್ರ. ಇನ್ನುಳಿದ ಹಣ ಯಾರ 'ಡ್ಯಾಡಿ'ಯ ಖಜಾನೆ ಸೇರಿದೆ ಸಿ ಟಿ ರವಿಯವರೆ?" ಎಂದು ಪ್ರಶ್ನಿಸಿದ್ದಾರೆ.
"ಇಲ್ಲ ಸಲ್ಲದ ಸುಳ್ಳುಗಳನ್ನು ಹೇಳುತ್ತಾ ಬೆಲೆಯೇರಿಕೆಯನ್ನು ಸಮರ್ಥಿಸಿಕೊಳ್ಳುತ್ತಿರುವ ಬಿಜೆಪಿಯವರು ಜನರ ರಕ್ತ ಕುಡಿಯುವ ರಕ್ತಾಪಿಪಾಸುಗಳಿದ್ದಂತೆ. ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ಪ್ರಜ್ಞೆಯೇ ಇಲ್ಲದಂತೆ ಆಡಳಿತ ನಡೆಸುತ್ತಿರುವ ಬಿಜೆಪಿ ಜನರ ಪಾಲಿಗೆ ನಿಜವಾದ ಪಾಪಿಗಳ ಸರ್ಕಾರವಾಗಿದೆ. ಈ ಪಾಪಿಗಳ ಸರ್ಕಾರ ಅಳಿದಾಗಲೇ ಜನರ ಸಂಕಷ್ಟಕ್ಕೆ ಮುಕ್ತಿ" ಎಂದು ಹೇಳಿದ್ದಾರೆ.