ಸೈದಾಬಾದ್ , ಸೆ 15 (DaijiworldNews/MS): ಇತ್ತೀಚಿಗೆ ಆರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿದ ಆರೋಪಿಯ ಬಂಧನಕ್ಕೆ ಹೈದರಾಬಾದ್ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದು, ಆರೋಪಿ ಪಲಕೊಂಡ ರಾಜು ಬಗ್ಗೆ ಸುಳಿವು ನೀಡಿದವರಿಗೆ ಪೊಲೀಸರು 10 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.
ಸೆಪ್ಟೆಂಬರ್ 9 ರ ಗುರುವಾರದಂದು ಹೈದರಾಬಾದ್ನ ಸೈದಾಬಾದ್ನಲ್ಲಿ 6 ವರ್ಷದ ಬಾಲಕಿಯನ್ನು ನೆರೆಮನೆಯ ವ್ಯಕ್ತಿಯಾಗಿದ್ದ ಪಲಕೊಂಡ ರಾಜು ಅತ್ಯಾಚಾರವೆಸಗಿ ಕೊಲೆ ಮಾಡಿದ್ದ.ಗುರುವಾರ ಸಂಜೆಯಿಂದ ಕಾಣೆಯಾಗಿದ್ದ ಬಾಲಕಿ ಯನ್ನು, ಪೋಷಕರು ರಾತ್ರಿವರೆಗೂ ಹುಡುಕಾಡಿದರೂ ಪತ್ತೆಯಾಗದೆ ಇದ್ದದ್ದರಿಂದ ಸೈದಾಬಾದ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು. ಪೊಲೀಸರಿಗೆ ದೂರು ನೀಡಿದ ನಂತರ, ನೆರೆ ಮನೆಯ ವ್ಯಕ್ತಿ ಕೂಡಾ ಕಾಣೆಯಾಗಿದ್ದು ಅನುಮಾನ ಬಂದಿದ್ದ ರಿಂದ, ಪೊಲೀಸರೊಂದಿಗೆ ಹೋಗಿ ಅಲ್ಲಿ ಹುಡುಕಾಡಿದ್ದಾರೆ. ಈ ವೇಳೆ ಬಾಲಕಿಯ ಮೃತದೇಹ ಬೆಡ್ಶೀಟ್ನಲ್ಲಿ ಸುತ್ತಿರುವುದನ್ನು ಕಂಡುಬಂದಿದೆ. ಒಸ್ಮಾನಿಯಾ ಜನರಲ್ ಆಸ್ಪತ್ರೆಯಲ್ಲಿ ನಡೆದ ಶವಪರೀಕ್ಷೆಯಲ್ಲಿ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ಖಚಿಪಟ್ಟಿದೆ. ಜೊತೆಗೆ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ಪರೀಕ್ಷೆಯಲ್ಲಿ ತಿಳಿದುಬಂದಿದೆ. ಈ ಘಟನೆಯ ನಂತರ, ಭಾರೀ ಪ್ರತಿಭಟನೆಗಳು ಭುಗಿಲೆದ್ದು, ಕಲ್ಲು ತೂರಾಟವೂ ನಡೆದಿತ್ತು.
ಈ ಮಧ್ಯೆ, ತೆಲಂಗಾಣ ಕಾರ್ಮಿಕ ಸಚಿವ ಚಿ ಮಲ್ಲಾರೆಡ್ಡಿ ಮಂಗಳವಾರ ಆರೋಪಿಯನ್ನು "ಎನ್ ಕೌಂಟರ್" ಮಾಡುವಂತೆ ಒತ್ತಾಯಿಸಿದ್ದಾರೆ ಹೈದರಾಬಾದ್ ಪೊಲೀಸರು, ಆರೋಪಿ ಚಿತ್ರವನ್ನು ಬಿಡುಗಡೆ ಮಾಡಿ, ಆತನ ಬಗ್ಗೆ ಮಾಹಿತಿ ನೀಡಿದರೆ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.
ಅಪರಾಧ ನಡೆದ ಐದು ದಿನಗಳು ಕಳೆದರೂ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ಟೀಕೆಗಳು ಹೆಚ್ಚಾಗುತ್ತಿದ್ದಂತೆ, ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಎಂ ಮಹೇಂದರ್ ರೆಡ್ಡಿ ಅವರು ಹೈದರಾಬಾದ್, ರಾಚಕೊಂಡ ಮತ್ತು ಸೈಬರಾಬಾದ್ನ ಎಲ್ಲಾ ಹಿತಿಯ ಪೊಲೀಸ್ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದ್ದಾರೆ. ಮಾತ್ರವಲ್ಲದೆ ಆರೋಪಿಯ ಸುಳಿವು ನೀಡಿದವರಿಗೆ 10 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದಾರೆ.