ಬಾಗಪತ್ ಸೆ 15 (DaijiworldNews/MS): ಉತ್ತರ ಪ್ರದೇಶದ 2022ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗಾಗಿ ಆರಂಭವಾದ ರಾಜಕೀಯ ಯುದ್ಧದಲ್ಲಿ, 'ಅಬ್ಬಾ ಜಾನ್' ಪದದ ನಂತರ, ಈಗ 'ಚಾಚಾಜಾನ್' ಪದ ಪ್ರವೇಶಿಸಿದೆ.
ಭಾರತೀಯ ರೈತರ ಒಕ್ಕೂಟದ (ಬಿಕೆಯು) ನಾಯಕ ರಾಕೇಶ್ ಟಿಕಾಯತ್ ಈಗ ಆಲ್ ಇಂಡಿಯಾ ಮಜಿಲಿಸ್-ಇ-ಇತ್ಹೇದುಲ್ ಮುಸ್ಲೀಮೀನ್ (ಎಐಎಂಐಎಂ) ರಾಷ್ಟ್ರೀಯ ಅಧ್ಯಕ್ಷ ಅಸಾದುದ್ದೀನ್ ಓವೈಸಿಯನ್ನು ಗುರಿಯಾಗಿಸಿಕೊಂಡು ಹೇಳಿಕೆ ನೀಡಿದ್ದಾರೆ.
ಉತ್ತರ ಪ್ರದೇಶದ ಬಾಗ್ಪತ್ನಲ್ಲಿ ಸಾರ್ವಜನಿಕ ರೈತರನ್ನು ಉದ್ದೇಶಿಸಿ ಮಾತನಾಡಿದ ಅವರು, ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಎಐಎಂಐಎಂ ಸ್ಪರ್ಧಿಸುವ ಕುರಿತು ಒವೈಸಿ ನಿರ್ಧಾರ ಕೈಗೊಂಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಸಾದುದ್ದೀನ್ ಒವೈಸಿ ಬಿಜೆಪಿಯ 'ಚಾಚಾ ಜಾನ್' (ಚಿಕ್ಕಪ್ಪ) ಎಂದು ಕರೆದಿರುವ ಟಿಕಾಯತ್ , ಬಿಜೆಪಿಯ ಚಿಕ್ಕಪ್ಪ ಒವೈಸಿ ಈಗ ಉತ್ತರ ಪ್ರದೇಶಕ್ಕೆ ಬಂದಿದ್ದಾರೆ. ಅದು ಬಿಜೆಪಿಯನ್ನು ಗೆಲುವಿನತ್ತ ಕೊಂಡೊಯ್ಯುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.
ಒವೈಸಿಗೆ ಬಿಜೆಪಿಯ ಆಶೀರ್ವಾದವಿದೆ. ಇದೇ ಕಾರಣಕ್ಕೆ ಅವರು ಧೈರ್ಯವಾಗಿ ಬಿಜೆಪಿಯನ್ನು ಅತ್ಯಂತ ಕಠಿಣ ಪದಗಳಲ್ಲಿ ನಿಂದಿಸಿದರೂ, ಅವರ ವಿರುದ್ಧ ಯಾವುದೇ ಪ್ರಕರಣ ದಾಖಲಿಸುವುದಿಲ್ಲ. ಸರ್ಕಾರ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಯಾಕೆಂದರೆ ಅವರಿಬ್ಬರೂ ಒಂದೇ ತಂಡ ಎಂದು ನೆನಪಿಟ್ಟಿಕೊಳ್ಳಬೇಕು. ಬಿಜೆಪಿಯೂ ಒವೈಸಿಯ ಸಹಾಯ ಪಡೆಯಲಿದೆ. ಈ ನಡೆಯನ್ನು ರೈತರು ಅರ್ಥ ಮಾಡಿಕೊಳ್ಳಬೇಕು. ಒವೈಸಿ ರೈತರನ್ನು ನಾಶ ಮಾಡಲಿದ್ದಾರೆ' ಎಂದು ಟಿಕಾಯತ್ ಹೇಳಿದ್ದಾರೆ.