ಬೆಂಗಳೂರು, ಸೆ.15 (DaijiworldNews/PY): "ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಮುಕ್ತವಾಗಿ ಚರ್ಚಿಸಲು ಸರ್ಕಾರ ಸಿದ್ಧ" ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೂ ಮುನ್ನ ಎಲ್ಲಾ ಕಡೆ ಚರ್ಚೆಯಾಗಿದೆ. ಈ ಬಗ್ಗೆ ವಿಶ್ವವಿದ್ಯಾಲಯ ಮಟ್ಟದಲ್ಲೂ ಚರ್ಚೆ ನಡೆದಿದೆ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣದ ಬಗ್ಗೆ ಇನ್ನೊಂದು ಸಮಿತಿ ಮಾಡಿ ಚರ್ಚಿಸುತ್ತೇವೆ. ಯಾರೂ ಆತಂಕಪಡಬೇಕಾಗಿಲ್ಲ" ಎಂದಿದ್ದಾರೆ.
"ಪ್ರಸ್ತುತ ಕಾಲಕ್ಕೆ ತಕ್ಕಂತೆ ಶಿಕ್ಷಣ ನೀಡಿ ಯುವಕರಿಗೆ ಉತ್ತಮವಾದ ಭವಿಷ್ಯ ರೂಪಿಸಲು ಈ ನೀತಿ ಪೂರಕವಾಗಿದೆ. ಹಾಗಾಗಿ ಇದರಿಂದ ಕ್ರಾಂತಿಕಾರಿ ಬದಲಾವಣೆ ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳಿಗೆ ಈ ವಿಚಾರವಾಗಿ ತಿಳಿಹೇಳುತ್ತೇ"ನೆ ಎಂದು ಹೇಳಿದ್ದಾರೆ.
ಇದಕ್ಕೂ ಮುನ್ನ ಎಂಜಿನಿಯರಿಂಗ್ ದಿನಾಚರಣೆ ಅಂಗವಾಗಿ ಕೆ.ಆರ್ ವೃತ್ತದ ಬಳಿ ಇರುವ ಸರ್. ಎಂ ವಿಶ್ವೇಶ್ವರಯ್ಯ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, "ವಿಶ್ವೇಶ್ವರಯ್ಯ ಅವರ ಜಯಂತಿಯನ್ನು ಎಂಜಿನಿಯರ್ ದಿನ ಎಂದು ನಾವು ಆಚರಣೆ ಮಾಡುತ್ತೇವೆ. ನಿಜವಾಗಿ ನಾಡು ಕಟ್ಟಿದವರು ಶ್ರಮಿಕ ವರ್ಗದವರು. ಈ ವರ್ಗವನ್ನು ಪ್ರತಿನಿಧಿಸುವವರು ವಿಶ್ವೇಶ್ವರಯ್ಯ ಅವರು" ಎಂದಿದ್ದಾರೆ.
"ವಿಶ್ವೇಶ್ವರಯ್ಯ ಅವರು ಪ್ರಗತಿಪರ ಚಿಂತನೆಯಿಂದ ನಾಡು ಕಟ್ಟಿದವರು. ಅವರ ಹಾದಿಯಲ್ಲಿ ನಾವು ಕೂಡಾ ನಾಡು ಕಟ್ಟುವ ಸಂಕಲ್ಪ ಮಾಡಬೇಕು" ಎಂದು ತಿಳಿಸಿದ್ದಾರೆ.