ನವದೆಹಲಿ, ಸೆ14 (DaijiworldNews/MS): ಎಲ್ಜೆಪಿ ಮುಖ್ಯಸ್ಥ ಚಿರಾಗ್ ಪಾಸ್ವಾನ್ ಅವರ ಸೋದರ ಸಂಬಂಧಿ ಮತ್ತು ಬಿಹಾರದ ಸಮಸ್ತಿಪುರದ ಸಂಸದ ಪ್ರಿನ್ಸ್ ರಾಜ್ ಪಾಸ್ವಾನ್ ವಿರುದ್ಧ ದೆಹಲಿ ಪೊಲೀಸರು ಅತ್ಯಾಚಾರ, ಕ್ರಿಮಿನಲ್ ಸಂಚು ಮತ್ತು ಸಾಕ್ಷ್ಯ ನಾಶದ ಪ್ರಕರಣವನ್ನು ದಾಖಲಿಸಿದ್ದಾರೆ.
ಇವರ ವಿರುದ್ದ ಮೂರು ತಿಂಗಳ ಹಿಂದೆಯೇ ಯುವತಿಯೊಬ್ಬಳು ದೆಹಲಿಯ ಕನಾಟ್ ಪ್ರದೇಶದಲ್ಲಿರುವ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ಈ ಕೇಸ್ ದೆಹಲಿ ಕೋರ್ಟ್ ಮೆಟ್ಟಿಲೇರಿತ್ತು. ಇದೀಗ ನ್ಯಾಯಾಲಯದ ನಿರ್ದೇಶನದ ಮೇರೆಗೆ ಪೊಲೀಸರು ಪ್ರಿನ್ಸ್ ರಾಜ್ ಪಾಸ್ವಾನ್ ವಿರುದ್ಧ ಸೆಪ್ಟೆಂಬರ್ 9 ರಂದು ಎಫ್ಐಆರ್ ದಾಖಲಿಸಿದೆ.
ಸಂತ್ರಸ್ತೆ ಯುವತಿಯೂ ತಾನು ಎಲ್ ಜೆಪಿ ಕಾರ್ಯಕರ್ತೆ ಎಂದು ಹೇಳಿಕೊಂಡಿದ್ದು, ತಾನು ಪ್ರಜ್ಞಾಹೀನ ಸ್ಥಿತಿಯಲ್ಲಿರುವಾಗ ತನಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾಳೆ.
ಯುವತಿಯ ದೂರಿನಲ್ಲಿ ಏನಿದೆ?
ಯುವತಿ ಮೂರು ತಿಂಗಳ ಹಿಂದೆಯೇ ದೂರು ನೀಡಿದ್ದಾಳೆ. ‘ನಾನು ಎಲ್ಜೆಪಿ ಕಾರ್ಯಕರ್ತೆ. ಮೊದಲು ಪ್ರಿನ್ಸ್ ರಾಜ್ರನ್ನು ಕಳೆದ ವರ್ಷ ಪಕ್ಷದ ಕಚೇರಿಯಲ್ಲಿ ಭೇಟಿಯಾಗಿದ್ದೆ. ಅದಾದ ಮೇಲೆ ನಾವು ಸಂಪರ್ಕದಲ್ಲಿ ಇದ್ದೆವು. ಅದಾದ ಬಳಿಕ ಹಲವು ಸಭೆಗಳಲ್ಲಿ ಭೇಟಿಯಾದೆವು. ಅಂಥದ್ದೇ ಒಂದು ಸಭೆಯಲ್ಲಿ ಇಬ್ಬರೂ ಭೇಟಿಯಾದಾಗ, ನಾನು ಒಂದು ಟೇಬಲ್ ಮೇಲಿದ್ದ ನೀರಿನ ಬಾಟಲ್ ತೆಗೆದುಕೊಂಡೆ. ಅಲ್ಲೇ ಇದ್ದ, ಪ್ರಿನ್ಸ್ ರಾಜ್ ಪಾಸ್ವಾನ್..ಆ ನೀರು ಬೇಡ. ನಾನು ಕೊಡುತ್ತೇನೆ ಎಂದು ಹೇಳಿ ಗ್ಲಾಸ್ನಲ್ಲಿ ನೀರು ಕೊಟ್ಟರು. ಅದನ್ನು ಅದನ್ನು ಸೇವಿಸಿದ ನಂತರ, ನಾನು ಪ್ರಜ್ಞಾಹೀನನಾಗಿದ್ದೆ.
ನನಗೆ ಮರಳಿ ಎಚ್ಚರ ಆಗುವಷ್ಟರಲ್ಲಿ ನನ್ನ ತಲೆ ಪ್ರಿನ್ಸ್ ರಾಜ್ ಭುಜದ ಮೇಲೆ ಇತ್ತು. ನೀನೀಗ ಅಸ್ವಸ್ಥಳಾಗಿರುವೆ, ಮನೆಗೆ ಹೋಗು ಎಂದರು. ನನಗೆ ಅನಾರೋಗ್ಯವಿದೆ ಎಂದು ಅವರು ನನಗೆ ಹೇಳಿದರು ಇದಾದ ಬಳಿಕ ನಾನು ಮನೆಗೆ ಮರಳಿದೆ. ನನ್ನೊಂದಿಗೆ ಏನಾಯಿತು ಎಂದು ನಾನು ಅವರನ್ನು ಮತ್ತೊಮ್ಮೆ ಪ್ರಶ್ನಿಸಿದೆ, ನಂತರ ಅವರು ರೆಕಾರ್ಡ್ ಮಾಡಿದ ವಿಡಿಯೋವನ್ನುತೋರಿಸಿದರು. ನನಗೆ ಪ್ರಜ್ಞೆ ಇಲ್ಲದಾಗ ಅವರು ನನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ. ವಿಡಿಯೋದಲ್ಲಿ ಅವರ ಮುಖ ಕಾಣಿಸುತ್ತಿಲ್ಲ. ಅದೇ ವಿಡಿಯೋ ಇಟ್ಟುಕೊಂಡು, ತನ್ನನ್ನು ಮದುವೆಯಾಗುವಂತೆ ಪೀಡಿಸುತ್ತಿದ್ದಾರೆ, ವಿಡಿಯೋ ಲೀಕ್ ಮಾಡುವ ಬೆದರಿಕೆ ಹಾಕುತ್ತಿದ್ದಾರೆ’ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.
ಇನ್ನು ಈ ಎಲ್ಲಾ ಆರೋಪಗಳನ್ನು ಅಲ್ಲಗಳೆದಿರುವ ಸಂಸದ ಪಾಸ್ವಾನ್ " ನನ್ನ ವಿರುದ್ಧ ಮಾಡಿದ ಯಾವುದೇ ಹಕ್ಕು ಅಥವಾ ಪ್ರತಿಪಾದನೆಯನ್ನು ನಾನು ಸ್ಪಷ್ಟವಾಗಿ ನಿರಾಕರಿಸುತ್ತೇನೆ. ಅಂತಹ ಎಲ್ಲಾ ಹಕ್ಕುಗಳು ಅಸ್ಪಷ್ಟವಾಗಿ ಸುಳ್ಳು, ಕಪೋಲಕಲ್ಪಿತವಾಗಿದ್ದು, ನನ್ನ ಪ್ರತಿಷ್ಠೆಗೆ ಧಕ್ಕೆ ತರುವ ಮೂಲಕ ವೃತ್ತಿಪರವಾಗಿ ಮತ್ತು ವೈಯಕ್ತಿಕವಾಗಿ ನನ್ನ ಮೇಲೆ ಒತ್ತಡ ಹೇರುವ ದೊಡ್ಡ ಕ್ರಿಮಿನಲ್ ಪಿತೂರಿಯ ಭಾಗವಾಗಿದೆ "ಎಂದು ಪತ್ರಿಕಾ ಪ್ರಕಟಣೆಯಲ್ಲಿ ಬರೆದಿದ್ದಾರೆ.