ಬೆಂಗಳೂರು, ಸ. 14 (DaijiworldNews/HR): ಬೆಳಗ್ಗೆದ್ದು ನಾವು ಹಿಂದೂ ಹಿಂದೂ ಎನ್ನುವ ಬಿಜೆಪಿಯವರೇ ಇದೀಗ ಹಿಂದೂ ದೇವಸ್ಥಾನ ಒಡೆಯುತ್ತಿದ್ದಾರೆ ಎಂದು ಜೆಡಿಎಸ್ ನಾಯಕ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಂಜನಗೂಡಿನ ದೇವಸ್ಥಾನಕ್ಕೆ ತನ್ನದೇ ಇತಿಹಾಸವಿದ್ದು, ಪುರಾತನ ಕಾಲದಲ್ಲಿ ಈ ದೇವಸ್ಥಾನ ನಿರ್ಮಿಸಲಾಗಿದೆ. ಸುಪ್ರೀಂ ಕೋರ್ಟ್ ಆದೇಶ ಪಾಲನೆ ಬೇಡವೆಂದು ಹೇಳುತ್ತಿಲ್ಲ. ಆದರೆ ದೇವಸ್ಥಾನ ಸಮಿತಿ ಜೊತೆ ಚರ್ಚಿಸಿ ಪರ್ಯಾಯ ದೇವಸ್ಥಾನ ನಿರ್ಮಿಸಿ ಬಳಿಕ ತೆರವು ಮಾಡಲಿ" ಎಂದಿದ್ದಾರೆ.
ಇನ್ನು "ಜೆಡಿಎಸ್ ಮುಳಗುವ ದೋಣಿ ಎನ್ನುತ್ತಿದ್ದರು. ಮುಳಗುವಾಗ ಹೇಗೆ ಮೇಲೆತ್ತುವುದು ಗೊತ್ತಿದೆ. ಸಮುದ್ರದ ಸಬ್ಮೆರಿನ್ ಮಷಿನ್ ನಮ್ಮ ಬಳಿ ಇದೆ. ಯಾವಾಗ ಮೇಲೆತ್ತಬೇಕು, ಯಾವಾಗ ಮುಳುಗಿಸಬೇಕು ಗೊತ್ತಿದೆ. ಸಬ್ಮೆರಿನ್ ಯಂತ್ರ ರಿಪೇರಿ ಮಾಡಿದ್ದೇವೆ" ಎಂದು ಖಾರವಾಗಿ ನುಡಿದಿದ್ದಾರೆ.