ಬೆಂಗಳೂರು, ಸ. 14 (DaijiworldNews/HR): ಸೆಪ್ಟಂಬರ್ 14ರಂದು ದೇಶಾದ್ಯಂತ ಹಿಂದಿ ದಿವಸ್ ಆಚರಣೆ ಮಾಡಲಾಗುತ್ತಿದ್ದು, ಇದನ್ನು ವಿರೋಧಿಸಿ ಕನ್ನಡ ಪರ ಸಂಘಟನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಧ್ವನಿ ಎತ್ತಿವೆ.
ಈ ಕುರಿತು ಟ್ವೀಟ್ ಮಾಡಿರುವ ಮಾಜಿ ಸಿಎಂ ಕುಮಾರಸ್ವಾಮಿ, "ನಮ್ಮ ನೆಲದಲ್ಲಿ ನಮ್ಮ ಕನ್ನಡ ಭಾಷೆಯೇ ಮೊದಲು. ಹಿಂದಿ ದಿವಸ ಆಚರಣೆ ಅಸಮರ್ಪಕ ಮತ್ತು ಅನಗತ್ಯ. ಹಿಂದಿ ಹೇರಿಕೆಯಿಂದ ಬಹುಭಾಷೆಯ ಭಾರತದ ನೆಮ್ಮದಿ ಕದಡುವುದು ಬೇಡ" ಎಂದಿದ್ದಾರೆ.
ಇನ್ನು "ಹಿಂದಿ ಹೇರುವವರಿಗೆ ತಿಳಿದಿರಲಿ. ನಮ್ಮ ಕನ್ನಡ ಅಭಿಜಾತ ಭಾಷೆ. ನಮ್ಮ ಕನ್ನಡ ಸಾವಿರಾರು ವರ್ಷಗಳ ಘನ ಚರಿತ್ರೆಯುಳ್ಳ ಭಾಷೆ. ನಮ್ಮ ಕನ್ನಡ 6.4 ಕೋಟಿ ಜನರ ಹೃದಯಮಿಡಿತ. ನಮ್ಮ ಪಾಲಿನ ಮಾತೃಸ್ವರೂಪಿಣಿ" ಎಂದರು.
"ಭಾರತ ಒಕ್ಕೂಟರಾಷ್ಟ್ರ. ಬಹುಸಂಸ್ಕೃತಿ, ಬಹುಭಾಷೆ, ಬಹುಜನರ ಆಗರ. ಅನೇಕ ಭಾಷೆಗಳ ತೊಟ್ಟಿಲು. ಆದರೆ ಒಂದೇ ಭಾಷೆಯನ್ನು ವೈಭವೀಕರಿಸುವ, ಹೇರುವ ಹುಂಬ ಪ್ರಯತ್ನವೇಕೆ?" ಎಂದು ಪ್ರಶ್ನಿಸಿದ್ದಾರೆ.