ಶಿವಮೊಗ್ಗ, ಸೆ.13 (DaijiworldNews/PY): "ಯಾವುದೇ ಕಾರಣಕ್ಕೂ ಈ ಬಾರಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಆಗಬಾರದು" ಎಂದು ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, "ಮುಂದಿನ 40-50 ವರ್ಷದ ಜನಾಂಗವನ್ನು ರೂಪಿಸುವ ಮಹತ್ವದ ವಿಷಯ ಇದಾಗಿದ್ದು, ಸಂಸತ್, ದೇಶದ ಯಾವುದೇ ರಾಜ್ಯದ ವಿಧಾನಸಭೆ ಹಾಗೂ ವಿಧಾನ ಪರಿಷತ್ನಲ್ಲಿ ಈ ಬಗ್ಗೆ ಚರ್ಚೆ ನಡೆದಿಲ್ಲ. ಈ ವರ್ಷ ಯಾವುದೇ ಕಾರಣಕ್ಕೂ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾಗಬಾರದು" ಎಂದು ಆಗ್ರಹಿಸಿದ್ದಾರೆ.
"ಈ ನೀತಿಯನ್ನು ದೇಶದ ಬಹು ಸಂಸ್ಕೃತಿಯನ್ನು ಗಮನದಲ್ಲಿಟ್ಟುಕೊಂಡು ಜಾರಿಗೊಳಿಸಬೇಕು. ಇದು ಶಿಕ್ಷಣ ಕ್ಷೇತ್ರದ ಖಾಸಗೀಕರಣದ ಮೊದಲ ಹೆಜ್ಜೆಯಾಗಿದೆ. ಪ್ರಧಾನಿ ಮೋದಿ ಅವರು ಎನ್ಇಪಿ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಏಕಪಕ್ಷೀಯವಾಗಿ ತೀರ್ಮಾನ ಕೈಗೊಂಡಿದ್ದಾರೆ. ಅವರು, ಶಿಕ್ಷಕರ ಸಂಘಟನೆ, ಶಿಕ್ಷಕರೊಂದಿಗೆ ಚರ್ಚಿಸಿಲ್ಲ. ಸರ್ಕಾರವೇ 3-18ನೇ ವರ್ಷದವರೆಗಿನ ಮಕ್ಕಳ ಶಿಕ್ಷಣದ ವೆಚ್ಚವನ್ನು ಭರಿಸಬೇಕು" ಎಂದಿದ್ದಾರೆ.
"ಇದಕ್ಕೆ ಹಾಲಿ ಇರುವ ಶಿಕ್ಷಣ ನೀತಿಯಲ್ಲಿ ಅವಕಾಶವಿದೆ. ಆದರೆ, ಈ ಬಗ್ಗೆ ನೂತನ ಎನ್ಇಪಿಯಲ್ಲಿ ಚಕಾರವಿಲ್ಲ. ಚರ್ಚೆಗೆ ಪ್ರಜಾಸತ್ತಾತ್ಮಕ ದೇಶದಲ್ಲಿ ಅವಕಾಶ ಇಲ್ಲದಂತಾಗಿದೆ. ಹಾಗಾಗಿ ಈ ರೀತಿಯ ಅವೈಜ್ಞಾನಿಕವಾದ ನೀತಿಗಳು ಜಾರಿಗೊಳ್ಳುತ್ತಿವೆ" ಎಂದು ತಿಳಿಸಿದ್ದಾರೆ.