ಬೆಂಗಳೂರು, ಸೆ.13 (DaijiworldNews/PY): ಬಿಜೆಪಿ ಪಾಲಿಗೆ ರಾಜಕೀಯವೆಂದರೆ 'ಕಳ್ಳದಂಧೆ'ಯಾಗಿದೆ. ಈ ಎಲ್ಲಾ ಭ್ರಷ್ಟಾಚಾರಗಳು ಮೋದಿಯವರ ಅಣತಿಯಂತೆ ನಡೆಯುತ್ತಿರುವುದು ಸ್ಪಷ್ಟ ಎಂದು ಕಾಂಗ್ರೆಸ್ ಹೇಳಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ಬಿಜೆಪಿಯ ಆಂತರಿಕ ಕಿತ್ತಾಟದಲ್ಲಿ ಸಿಪಿ ಯೋಗೀಶ್ವರ್ ಆಪರೇಷನ್ ಕಮಲಕ್ಕಾಗಿ 9 ಕೋಟಿ ಸಾಲ ಮಾಡಿದ್ದರು ಎಂಬ ಅಂಶ ಬಯಲಾಗಿತ್ತು, ಸಾಲ ಮಾಡಿದ್ದೇಕೆ? ಯಾಕಾಗಿ ಈ ಬಂಡವಾಳ ಹೂಡಿಕೆ? ಬಿಜೆಪಿ ಪಾಲಿಗೆ ರಾಜಕೀಯವೆಂದರೆ 'ಕಳ್ಳದಂಧೆ'ಯಾಗಿದೆ. ಈ ಎಲ್ಲಾ ಭ್ರಷ್ಟಾಚಾರಗಳು ಮೋದಿಯವರ ಅಣತಿಯಂತೆ ನಡೆಯುತ್ತಿರುವುದು ಸ್ಪಷ್ಟ ಎಂದಿದೆ.
"ಜನರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲದ ಜನವಿರೋಧಿ ಬಿಜೆಪಿಗೆ ಕಾಂಗ್ರೆಸ್ನ ಜನಪರ ಹೋರಾಟದಿಂದ ನಡುಕ ಶುರುವಾಗಿದೆ, ಅದನ್ನು ಮರೆಮಾಚಲು ಹಾಗೂ ಬೆಲೆ ಏರಿಕೆಯ ಬಗ್ಗೆ ಚರ್ಚಿಸಲು ಹೆದರಿ ದಿಕ್ಕು ತಪ್ಪಿಸಲು ಯತ್ನಿಸುತ್ತಿದೆ. ಡ್ರೈವರ್ ಬದಲಿಸಿದರೂ ಬಿಜೆಪಿ ಸರ್ಕಾರ ಸ್ಟಾರ್ಟ್ ಆಗುತ್ತಿಲ್ಲ, ಏಕೆಂದರೆ ಅದು ಮೂಲತಃ ಡಕೋಟಾ ಇಂಜಿನ್ ಸರ್ಕಾರ!" ಎಂದು ಲೇವಡಿ ಮಾಡಿದೆ.
"ಬೆಲೆ ಏರಿಕೆಯಿಂದ ಜನರು ಬದುಕಲು ಪರದಾಡುತ್ತಿದ್ದರೂ ಜನರ ನೋವಿಗೆ ಸ್ಪಂದಿಸದೆ ಹೊಣೆಗೇಡಿಗಳಂತೆ ಸಂವೇದನಾ ಶೂನ್ಯರಾಗಿ ಬಾಲಿಶ ಮಾತುಗಳನ್ನಾಡುತ್ತಿದ್ದಾರೆ ಬಿಜೆಪಿ ನಾಯಕರು. ಬೆಲೆ ಇಳಿಸಿ ಜನರ ನೆರವಿಗೆ ನಿಲ್ಲುವ ಬಗ್ಗೆ ಯಾವೊಬ್ಬ ಬಿಜೆಪಿ ನಾಯಕರೂ ತುಟಿ ಬಿಚ್ಚದಿರುವುದು ಅವರ ಜನ ವಿರೋಧಿ ಮನಸ್ಥಿತಿಗೆ ಸಾಕ್ಷಿ" ಎಂದು ಹೇಳಿದೆ.
"ಕರೋನಾ ನಡುವೆ ಜನತೆ ಸಂಪಾದನೆ ಇಲ್ಲದೆ, ಉದ್ಯೋಗವಿಲ್ಲದೆ ಕಂಗಾಲಾಗಿದ್ದಾರೆ, ಈ ನಡುವೆ ಬಿಜೆಪಿಯ ಲೂಟಿ ಒಂದೆರಡಲ್ಲ. ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ, ಸಿಲಿಂಡಲ್ ದರ ಏರಿಕೆ, ಆಸ್ತಿ ತೆರಿಗೆ ಏರಿಕೆ, ಗೊಬ್ಬರದ ಬೆಲೆ ಏರಿಕೆ, ಕೃಷಿ ಅಗತ್ಯ ವಸ್ತುಗಳ ಬೆಲೆ ಏರಿಕೆ, ದಿನಸಿ ಬೆಲೆ ಏರಿಕೆ, ಟೋಲ್ ದರ ಏರಿಕೆ" ಎಂದಿದೆ.
"ಪೆಟ್ರೋಲ್ ಡೀಸೆಲ್ಗಳ ಬೆಲೆ ಏರಿಕೆಯಿಂದ ಇಡೀ ಅರ್ಥ ವ್ಯವಸ್ಥೆಯ ಮೇಲೆ ಪರಿಣಾಮ ಬೀರಲಿದೆ, ಬಹುತೇಕ ವಸ್ತುಗಳ ಬೆಲೆ ಏರಿಕೆಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕಾರಣವಾಗಲಿದೆ. ಆರ್ಥಿಕ ಚಟುವಟಿಕೆಗಳು ಕುಂಠಿತಗೊಳ್ಳಲಿವೆ. ಆದರೆ ಬಿಜೆಪಿ ಸರ್ಕಾರ ತೆರಿಗೆ ಇಳಿಸುವ ಸಣ್ಣ ಮನಸ್ಸನ್ನೂ ಮಾಡದೆ ನಿರ್ದಯವಾಗಿ ನಡೆದುಕೊಳ್ಳುತ್ತಿದೆ" ಎಂದು ಕಿಡಿಕಾರಿದೆ.
"ಬಿ ಎಸ್ ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಇಳಿಸಿದ್ದಾಯ್ತು, ಪಕ್ಷದಲ್ಲೂ ಮೂಲೆಗೆ ಕೂರಿಸಿದ್ದಾಯ್ತು, ಈಗ ಸದನದಲ್ಲೂ ಕೊನೆಯ ಸಾಲಿಗೆ ತಳ್ಳಲಾಗಿದೆ. ಬಿಜೆಪಿ ಪಕ್ಷ ಬಿಎಸ್ವೈ ಅವರನ್ನು ಇಷ್ಟು ಬೇಗ ಈ ದುಸ್ಥಿತಿಗೆ ತರಬಾರದಿತ್ತು! ಅಸ್ತಿತ್ವಕ್ಕಾಗಿ ಪ್ರವಾಸದ ಮಾತಾಡುತ್ತಿರುವ ಬಿಎಸ್ವೈ ಅವರನ್ನು ಸಂಪೂರ್ಣ ಕಟ್ಟಿಹಾಕಲು ನಳಿನ್ ಕುಮಾರ್ ಕಟೀಲ್ ತಂಡ ಹೊಂಚು ಹಾಕಿದೆ" ಎಂದಿದೆ.