ಮೈಸೂರು, ಸೆ.13 (DaijiworldNews/PY): "ಹಿಂದೂ ದೇವಾಲಯಗಳ ರಕ್ಷಣೆಗೆ ವಕ್ಫ್ ಬೋರ್ಡ್ ಮಾದರಿಯಲ್ಲಿ ಒಂದು ಪ್ರತ್ಯೇಕವಾದ ಬೋರ್ಡ್ ಮಾಡಬೇಕು" ಎಂದು ಸಂಸದ ಪ್ರತಾಪ್ ಸಿಂಹ ಆಗ್ರಹಿಸಿದ್ದಾರೆ.
ದೇವಾಲಯ ತೆರವು ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ಸಿಎಂ ಬಸವರಾಜ ಬೊಮ್ಮಾಯಿ ಅವರೊಂದಿಗೆ ಇಂದು ಬೆಳಗ್ಗೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದು, ಅವರಿಗೆ ನ್ಯಾಯಾಲಯದ ಆದೇಶವನ್ನು ಸಂಪೂರ್ಣವಾಗಿ ವಿವರಿಸಿದ್ದೇನೆ. ನ್ಯಾಯಾಲಯದ ಆದೇಶದಲ್ಲಿ ಎಲ್ಲೂ ಕೂಡಾ ಏಕಾಏಕಿ ದೇವಾಲಯದ ತೆರವಿಗೆ ಸೂಚನೆ ನೀಡಿಲ್ಲ ಎನ್ನುವ ಬಗ್ಗೆ ಸ್ಪಷ್ಟಪಡಿಸಿದ್ದೇನೆ" ಎಂದಿದ್ದಾರೆ.
"ನಂಜನಗೂಡು ತಹಶೀಲ್ದಾರ್ ವಿರುದ್ದ ಕ್ರಮ ತೆಗೆದುಕೊಳ್ಳಬೇಕು. ಹಾಗೆಯೇ, ಜಿಲ್ಲಾಡಳಿತಕ್ಕೂ ಕೂಡಾ ಸೂಚನೆ ನೀಡಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ತಿಳಿಸಿದ್ದೇನೆ" ಎಂದು ಹೇಳಿದ್ದಾರೆ.
"ದೇವಾಲಯವನ್ನು ಏಕಾಏಕಿ ಕೆಡವಿದ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳುತ್ತೇವೆ. ದೇವಾಲಯದ ರಕ್ಷಣೆಗೆ ನೂತನವಾಗಿ ಆದೇಶ ಮಾಡುತ್ತೇನೆ" ಎಂದು ಸಿಎಂ ತಿಳಿಸಿದ್ದಾರೆ ಎಂದಿದ್ದಾರೆ.