ಬೆಂಗಳೂರು, ಸ. 13 (DaijiworldNews/HR): ಯುಪಿಎ ಸರ್ಕಾರದ ಅವಧಿಯಲ್ಲಿಯೂ ಧರಣಿ ನಡೆಸಬೇಕಿತ್ತು, ಆಗ ಇವರು ಮಾಡಿದ ಪ್ರತಿಭಟನೆಗೆ ಅರ್ಥ ಬರುತ್ತಿತ್ತು ಎಂದು ಕಾಂಗ್ರೆಸ್ ನಾಯಕರು ಬೆಲೆ ಏರಿಕೆ ಖಂಡಿಸಿ ಎತ್ತಿನ ಗಾಡಿ ಚಲೋ ವಿರುದ್ಧ ಸಿಎಂ ಬಸವರಾಜ್ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, "ಬೆಲೆ ಏರಿಕೆ ಖಂಡಿಸಿ ರಾಜ್ಯದ ಕಾಂಗ್ರೆಸ್ ನಾಯಕರು ಇಂದು ಎತ್ತಿನ ಗಾಡಿಗಳಲ್ಲಿ ಅಧಿವೇಶನಕ್ಕೆ ಆಗಮಿಸಿ ಪ್ರತಿಭಟನೆ ನಡೆಸುತ್ತಿದ್ದು, ಇವರದೇ ಯುಪಿಎ ಸರ್ಕಾರದ ಅವಧಿಯಲ್ಲಿಯೂ ಪೆಟ್ರೋಲ್, ಡೀಸೆಲ್, ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿತ್ತು. ಆಗ ಇವರು ಪ್ರತಿಭಟನೆ ಮಾಡಬೇಕಿತ್ತು ಯಾಕೆ ಮಾಡಿಲ್ಲ? ಎಂದು ಪ್ರಶ್ನಿಸಿರುವ ಅವರು ಇದೊಂದು ರಾಜಕೀಯ ಪ್ರೇರಿತ ಪ್ರತಿಭಟನೆ" ಎಂದಿದ್ದಾರೆ.
ಇನ್ನು ಬೆಲೆ ಏರಿಕೆ ಬಗ್ಗೆ ಸದನದಲ್ಲಿ ಪ್ರಶ್ನೆ ಮಾಡುವುದಾಗಿ ಕಾಂಗ್ರೆಸ್ ನಾಯಕರು ಹೇಳಿದ್ದು, ಕಾಂಗ್ರೆಸ್ ನವರ ಎಲ್ಲಾ ಪ್ರಶ್ನೆಗಳಿಗೆ ನಾನು ಸದನದಲ್ಲೇ ತಕ್ಕ ಉತ್ತರವನ್ನು ನೀಡುತ್ತೇನೆ ಎಂದು ಹೇಳಿದ್ದಾರೆ.