ಬೆಳಗಾವಿ, ಸೆ.13 (DaijiworldNews/PY): ಕಾಂಗ್ರೆಸ್ನಿಂದ ಬರುವುದಕ್ಕೆ ಬಿಜೆಪಿಯವರು ನನಗೆ ಹಣದ ಆಫರ್ ಬಂದಿತ್ತು. ಒಳ್ಳೆಯ ಸ್ಥಾನಮಾನ ಕೊಡಿ ಎಂದಿದ್ದೆ ಎಂದು ಹೇಳಿದ್ದ ಮಾಜಿ ಸಚಿವ ಶ್ರೀಮಂತ ಪಾಟೀಲ್ ಅವರು ಈಗ ಉಲ್ಟಾ ಹೊಡೆದಿದ್ದಾರೆ.
"ನನಗೆ ಬಿಜೆಪಿಯಿಂದ ಹಣದ ಆಫರ್ ಬಂದಿರಲಿಲ್ಲ. ನಾನು ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ಹಾಗೂ ಬಿಜೆಪಿಯ ತತ್ವ ಸಿದ್ಧಾಂತಗಳನ್ನು ಒಪ್ಪಿಕೊಂಡೇ ಬಿಜೆಪಿಗೆ ಸೇರಿದ್ದೇನೆ. ಸಚಿವ ಸ್ಥಾನ ದೊರಕುವ ಅವಕಾಶ ಇತ್ತು. ಆದರೆ, ದೊರೆತಿಲ್ಲ. ನನಗೆ ಸಚಿವ ಸ್ಥಾನ ನೀಡುವಂತೆ ಎಲ್ಲಾ ಜನಾಂಗದವರು ಒತ್ತಾಯ ಮಾಡಿದ್ದರು" ಎಂದಿದ್ದಾರೆ.
ಈ ಹಿಂದೆ ಹೇಳಿಕೆ ನೀಡಿದ್ದ ಶ್ರೀಮಂತ ಪಾಟೀಲ್, "ಕಾಂಗ್ರೆಸ್ನಿಂದ ಬರುವುದಕ್ಕೆ ಬಿಜೆಪಿಯವರು ನನಗೆ ಹಣದ ಆಫರ್ ಬಂದಿತ್ತು. ಎಷ್ಟು ಹಣ ಬೇಕೆಂದು ಕೇಳಿದ್ದರು. ಒಂದು ಪೈಸೆಯನ್ನೂ ಪಡೆಯುವುದಿಲ್ಲ, ಸರ್ಕಾರ ಬಂದ ನಂತರ ಒಳ್ಳೆಯ ಸ್ಥಾನಮಾನ ಕೊಡಿ ಚೆನ್ನಾಗಿ ನಿರ್ವಹಿಸಿ ಜನಸೇವೆ ಮಾಡುತ್ತೇನೆ ಎಂದಿದ್ದೆ" ಎಂದು ಹೇಳಿದ್ದರು.
"ಹಣ ಪಡೆಯದೆ ಬಿಜೆಪಿ ಸೇರಿದ್ದೇನೆ. ಯಾವ ಕಾರಣದಿಂದ ಸಚಿವ ಸಂಪುಟದಲ್ಲಿ ನನಗೆ ಸ್ಥಾನ ಕೊಟ್ಟಿಲ್ಲವೋ ಗೊತ್ತಿಲ್ಲ. ಮುಂದಿನ ತಿಂಗಳಲ್ಲಿ ಸಚಿವ ಸಂಪುಟ ವಿಸ್ತರಣೆ ನಡೆದಾಗ ಖಂಡಿತವಾಗಿಯೂ ಕೊಡುವುದಾಗಿ ಭರವಸೆ ನೀಡಿದ್ದಾರೆ. ಇನ್ನು ನಾನು 20 ವರ್ಷ ಒಕ್ಕಲುತನ ಮಾಡಿದ್ದು,ಕೃಷಿ ಖಾತೆ ನೀಡಿದರೆ ಒಳ್ಳೆಯ ಕೆಲಸ ಮಾಡುತ್ತಿದ್ದೆ. ಆದರೆ ಜವಳಿ ಮತ್ತು ಅಲ್ಪಸಂಖ್ಯಾತ ಖಾತೆ ನೀಡಿದ್ದರು. ಅದನ್ನು ಪ್ರಾಮಾಣಿಕತೆಯಿಂದ ನಿಭಾಯಿಸಿದ್ದೇನೆ" ಎಂದಿದ್ದರು.