ಬೆಂಗಳೂರು, ಸೆ.13 (DaijiworldNews/PY): ಪೆಟ್ರೋಲಿಯಂ ಉತ್ಪನ್ನಗಳ ದರ ಹಾಗೂ ಅಗತ್ಯ ವಸ್ತುಗಳ ದರ ಏರಿಕೆ ವಿರೋಧಿಸಿ ಪ್ರತಿಭಟನೆ ಆರಂಭಿಸಿರುವ ಕಾಂಗ್ರೆಸ್, ಎತ್ತಿನ ಬಂಡಿಯ ಪ್ರಯಾಣ ಪ್ರಾರಂಭಿಸಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಇತರರು ಎತ್ತಿನ ಬಂಡಿಯಲ್ಲಿ ಹೊರಟಿದ್ದಾರೆ.
ಸ್ವತಃ ಸಿದ್ದರಾಮಯ್ಯ ಅವರೇ ಎತ್ತಿನ ಬಂಡಿಯನ್ನು ಚಲಾಯಿಸುತ್ತಿದ್ದಾರೆ. ಇವರೊಂದಿಗೆ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್ ಆರ್ ಪಾಟೀಲ, ಶಾಸಕ ಎಂ ಬಿ ಪಾಟೀಲ ಇದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ ಶಿವಕುಮಾರ್, "ದೇಶದ ಜನರ ಜೇಬಿಗೆ ಬಿಜೆಪಿ ಸರ್ಕಾರ ಕೈ ಹಾಕಿ ದೋಚುತ್ತಿದೆ. ಡೀಸೆಲ್ ಹಾಗೂ ಪೆಟ್ರೋಲ್ ದರವನ್ನು ಪ್ರತಿ ಲೀಟರ್ಗೆ 25 ರೂ. ಕಡಿಮೆ ಮಾಡಬೇಕು. ಅಲ್ಲದೇ, ಎಲ್ಪಿಜಿ ಸಿಲಿಂಡರ್ ದರವನ್ನೂ ಕೂಡಾ ಕಡಿಮೆ ಮಾಡಬೇಕು" ಎಂದು ಒತ್ತಾಯಿಸಿದ್ದಾರೆ.
"ವಿಧಾನ ಮಂಡಲ ಅಧಿವೇಶನ ನಡೆಯುತ್ತಿದ್ದು, ಈ ವೇಳೆ ಜನಸಾಮಾನ್ಯರ ಸಂಕಷ್ಟವನ್ನು ಸರ್ಕಾರ ಅರಿಯುವುದು ಮುಖ್ಯ. ಹಾಗಾಗಿ ನಾವು ಎತ್ತಿನ ಬಂಡಿಯಲ್ಲಿ ಹೋಗುತ್ತಿದ್ದೇವೆ" ಎಂದಿದ್ದಾರೆ.