ಬೆಂಗಳೂರು, ಸೆ 13 (DaijiworldNews/MS): ಇಂದಿನಿಂದ ವಿಧಾನ ಮಂಡಲ ಅಧಿವೇಶನ ಪ್ರಾರಂಭಗೊಳ್ಳಲಿದ್ದುಈ ಸಂದರ್ಭದಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಮುಖ್ಯವಾಗಿ ಪ್ರತಿಪಕ್ಷ ಕಾಂಗ್ರೆಸ್ ಸಜ್ಜುಗೊಳ್ಳುತ್ತಿದೆ.
ಅಗತ್ಯ ವಸ್ತುಗಳ ಬೆಲೆ ಏರಿಕೆ, ಪ್ರವಾಹ ಸಂತ್ರಸ್ತರಿಗೆ ಪರಿಹಾರ ವಿಳಂಬ, ವರ್ಗಾವಣೆ ದಂಧೆ, ಕೋವಿಡ್ ನಿರ್ವಹಣೆ, ಲಸಿಕೆ ಪೂರೈಕೆಯಲ್ಲಿ ಕೊರತೆ, ರಾಷ್ಟ್ರೀಯ ಶಿಕ್ಷಣ ನೀತಿ ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು, ತರಾಟೆಗೆ ತೆಗೆದುಕೊಳ್ಳಲು ಸಜ್ಜಾಗಿವೆ.
ಅಧಿವೇಶನದ ಮೊದಲ ದಿನ, ಅಗತ್ಯ ವಸ್ತುಗಳ ಬೆಲೆ ಏರಿಕೆ ವಿಚಾರವನ್ನು ಅಧಿವೇಶದಲ್ಲಿ ಪ್ರಸ್ತಾಪಿಸಲು ತೀರ್ಮಾನಿಸಿರುವ ಕಾಂಗ್ರೆಸ್ , ಎತ್ತಿನಗಾಡಿ ಚಲೋ ಚಳುವಳಿಗೆ ಮುಂದಾಗಿದೆ. ಸೋಮವಾರದಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಂಧನ ಬೆಲೆಯ ಏರಿಕೆಯನ್ನು ಖಂಡಿಸಿ ಎತ್ತಿನ ಗಾಡಿಯಲ್ಲಿ ವಿಧಾನಸೌಧಕ್ಕೆ ಬರಲು ಸಜ್ಜಾಗಿದ್ದಾರೆ.
ಇನ್ನೊಂದೆಡೆ ಸರ್ಕಾರ, ಈ ಕಲಾಪದಲ್ಲಿ 18 ಮಸೂದೆಗಳ ಅಂಗೀಕಾರಕ್ಕೆ ಬಯಸುತ್ತಿದೆ. ಕರ್ನಾಟಕ ಪೊಲೀಸ್ ಕಾಯ್ದೆ 1963, ಆನ್ ಲೈನ್ ಜೂಜಾಟ ಸೇರಿದಂತೆ ಎಲ್ಲಾ ಪ್ರಮುಖ ತಿದ್ದುಪಡಿಗಳಿಗೆ ಬಯಸುತ್ತಿದೆ.